ಕೋಲ್ಕೊತಾ: ಈಡನ್ ಗಾರ್ಡನ್ಸ್ನಲ್ಲಿ ನಡೆದ ಶುಕ್ರವಾರದ ರೋಚಕ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 23 ರನ್‌ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಹ್ಯಾರಿ ಬ್ರೂಕ್ ಅಜೇಯ ಶತಕ ಬಾರಿಸಿ ಮಿಂಚಿದರು. ಇದು ಈ ಆವೃತ್ತಿಯ ಚೊಚ್ಚಲ ಶತಕವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಸನ್ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 228 ರನ್ ಬಾರಿಸಿತು. ಜವಾಬಿತ್ತ ಕೆಕೆಆರ್ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ IPL 2023; ಲಕ್ನೋ ಮೇಲೆ ಸವಾರಿ ಮಾಡಿತೇ ಪಂಜಾಬ್
ಇಂಗ್ಲೆಂಡ್ ಮೂಲದ ಆಟಗಾರ ಹ್ಯಾರಿ ಬ್ರೂಕ್ ಅವರು ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 55 ಎಸೆತಗಳಲ್ಲಿ 3 ಸಿಕ್ಸರ್ ಮತ್ತು ಅಮೋಘ 12 ಬೌಂಡರಿಗಳೊಂದಿಗೆ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಬ್ಯಾಟಿಂಗ್ ಸಾಹಸದಿಂದ ಹೈದರಾಬಾದ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿತು. ತಂಡದ ಗೆಲುವಿಗೆ ಕಾರಣರಾದ ಬ್ರೂಕ್ ಅವರಿಗೆ ಫ್ರಾಂಚೈಸಿ ರಸಗುಲ್ಲ ಪಾರ್ಟಿ ನೀಡಿದೆ. ಬ್ರೂಕ್ ಅವರು ಹೊಟೇಲ್ನಲ್ಲಿ ರಸಗುಲ್ಲ ತಿನ್ನುತ್ತಿರುವ ವಿಡಿಯೊಗೆ “ಸ್ವೀಟ್ ಡ್ರೀಮ್ಸ್” ಎಂದು ಬರೆದು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಉಮ್ರಾನ್ ಮಲಿಕ್ಗೆ 28 ರನ್ ಬಾರಿಸಿದ ನಿತೀಶ್ ರಾಣಾ
ಚೇಸಿಂಗ್ ವೇಳೆ ಕೆಕೆಆರ್ ತಂಡದ ನಾಯಕ ನಿತೀಶ್ ರಾಣಾ ಅವರು ಉಮ್ರಾನ್ ಮಲಿಕ್ ಅವರ ಮೊದಲ ಓವರ್ನಲ್ಲಿಯೇ ಎರಡು ಭರ್ಜರಿ ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಒಟ್ಟು 28 ರನ್ ಬಾರಿಸಿದರು. ಈ ವಿಡಿಯೊ ವೈರಲ್ ಆಗಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ರಿಂಕು ಸಿಂಗ್ ಅವರು 5 ಸಿಕ್ಸರ್ ಬಾರಿಸಿ ಮಿಂಚಿದ್ದರು. ಇದೀಗ ರಾಣಾ ಅವರ ಈ ಪ್ರದರ್ಶನ ಕಂಡು ಕ್ರಿಕೆಟ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಈ ಓವರ್ನಲ್ಲಿ ಸರಿಯಾಗಿ ದಂಡಿಸಿಕೊಂಡ ಕಾರಣ ಉಮ್ರಾನ್ಗೆ ಪಂದ್ಯದ ಅಂತಿಮ ಓವರ್ ನೀಡಲಾಯಿತು. ಇಲ್ಲಿ ಅವರು ಶಾರ್ದುಲ್ ಠಾಕೂರ್ ಅವರ ವಿಕೆಟ್ ಕೆಡವಿದರು. ಎರಡು ಓವರ್‌ಗಳಿಗೆ 36 ರನ್ ನೀಡಿ ಒಂದು ವಿಕೆಟ್ ಪಡೆದರು.