ಮುಂಬಯಿ: ಕಳೆದ ಕೆಲವು ವರ್ಷಗಳಿಂದ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಸಂಜು ಸ್ಯಾಮ್ಸನ್ ಎಂದಿಗೂ ರಾಷ್ಟ್ರೀಯ ತಂಡದ ಖಾಯಂ ಸದಸ್ಯನಾಗಿಲ್ಲ. ಕೇವಲ ಒಂದೆರಡು ಪಂದ್ಯಗಳಲ್ಲಿ ಅವಕಾಶ ನೀಡಿ ಬಳಿಕ ಸರಣಿಯಿಂದ ಕೈಬಿಡಲಾಗುತ್ತದೆ. ಇದೇ ವಿಚಾರವಾಗಿ ಬಿಸಿಸಿಐ ವಿರುದ್ಧ ಹಲವು ಬಾರಿ ಅನೇಕ ಮಾಜಿ ಆಟಗಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಯುವ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಕೂಡ ಸಂಜು ಪರ ಬ್ಯಾಟ್ ಬೀಸಿದ್ದಾರೆ.
ಗುಜರಾತ್ ವಿರುದ್ಧ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ರಾಜಸ್ಥಾನ್ ತಂಡ 4 ರನ್ಗಳಿಗೆ 2 ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಎದುರಿಸಿತು. ಯಶಸ್ವಿ ಜೈಸ್ವಾಲ್ 1 ಹಾಗೂ ಜಾಸ್ ಬಟ್ಲರ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ದೇವದತ್ತ ಪಡಿಕ್ಕಲ್ ಕೂಡ 26 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರು. ರಿಯಾನ್ ಪರಾಗ್ 5 ರನ್ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ 10.3 ಓವರ್ಗಳಲ್ಲಿ ತಂಡ 55 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತು. ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕ ಸಂಜು ಸ್ಯಾಮ್ಸನ್ ಅವರು 32 ಎಸೆತದಲ್ಲಿ ಆರು ಭರ್ಜರಿ ಸಿಕ್ಸರ್ ಮೂಲಕ 60 ರನ್ ಚಚ್ಚಿದರು. ಅದರಲ್ಲೂ ಸ್ಪಿನ್ನರ್ ರಶೀದ್ ಖಾನ್ ಅವರ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು.
ಇದನ್ನೂ ಓದಿ IPL 2023 : ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಲಯವನ್ನು ಹೊಗಳಿದ ಮಿಥಾಲಿ ರಾಜ್
ಸಂಜು ಅವರ ಈ ಬ್ಯಾಟಿಂಗ್ ಕಂಡ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದು “ನಾನು ಪ್ರತಿ ಪಂದ್ಯದಲ್ಲಿಯೂ ಭಾರತೀಯ ಟಿ20 ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಆಡಿಸುತ್ತಿದ್ದೆ” ಎಂದು ಹೇಳಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಪರೋಕ್ಷವಾಗಿ ಕುಟುಕಿದ್ದಾರೆ. ಜತೆಗೆ ಸಂಜು ಅವರ ಬ್ಯಾಟಿಂಗ್ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡವು ಏಳು ವಿಕೆಟ್ ನಷ್ಟಕ್ಕೆ 177 ರನ್ ಮಾಡಿದರೆ, ರಾಜಸ್ಥಾನ ತಂಡವು 19.2 ಓವರ್ ನಲ್ಲಿ ಗುರಿ ತಲುಪಿ ಜಯ ಸಾಧಿಸಿತು.