ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಮವಾರ ನಡೆದ ಪಂದ್ಯದಲ್ಲಿ ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ರನ್ಗಳ ಅಂತರದಿಂದ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ ಅವರು ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ಧೋನಿ ಬಳಗ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ವೈಶಾಖ್ ಬರೋಬ್ಬರಿ 62 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ಆರ್ಸಿಬಿ ಪರ 4 ಓವರ್ಗಳಲ್ಲಿ ಅತ್ಯಧಿಕ ರನ್ ನೀಡಿದ ದ್ವಿತೀಯ ಹಾಗೂ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಆರ್ಸಿಬಿ ಪರ ಅತ್ಯಂತ ದುಬಾರಿ ಸ್ಪೆಲ್ ಮಾಡಿದ ಕೆಟ್ಟ ದಾಖಲೆ ಆಸೀಸ್ನ ಜೋಶ್ ಹ್ಯಾಝಲ್ವುಡ್ ಹೆಸರಿನಲ್ಲಿದೆ. ಅವರು 2022ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್ಗಳಲ್ಲಿ 64 ರನ್ ನೀಡಿದ್ದರು. ಇದೀಗ ಈ ಕಳಪೆ ಬೌಲಿಂಗ್ ದಾಖಲೆಯ ಪಟ್ಟಿ ಮತ್ತೊಬ್ಬರಾಗಿ ವೈಶಾಖ್ ವಿಜಯ್ ಕುಮಾರ್ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ IPL 2023: ಡಿಜಿಟಲ್ ವೀಕ್ಷಣೆಯಲ್ಲಿ ದಾಖಲೆ ಬರೆದ ಆರ್ಸಿಬಿ-ಚೆನ್ನೈ ಪಂದ್ಯ
ವೈಶಾಖ್ ವಿಜಯ್ ಕುಮಾರ್ ಅವರು ಡೆಲ್ಲಿ ವಿರುದ್ಧದ ಪದಾರ್ಪಣೆ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಪಂದ್ಯದಲ್ಲಿ 4 ಓವರ್ಗೆ ಕೇವಲ 20 ರನ್ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್ ಕಿತ್ತು ಮಿಂಚಿದ್ದರು. ಇವರ ಸಾಧನೆಗೆ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ದ್ವಿತೀಯ ಪಂದ್ಯದಲ್ಲಿಯೂ ಇವರ ಬೌಲಿಂಗ್ ಮೇಲೆ ಹೆಚ್ಚಿನ ವಿಶ್ವಾಸ ಇರಿಸಲಾಗಿತ್ತು. ಆದರೆ ಅದು ಹುಸಿಗೊಂಡಿತು. ಅವರು ದುಬಾರಿಯಾಗಿ ಪರಿಣಮಿಸಿ ತಂಡದ ಹಿನ್ನಡೆಗೆ ಕಾರಣರಾದರು. ಸದ್ಯ ಅವರು ಮುಂದಿನ ಪಂದ್ಯದಲ್ಲಿ ಅವಕಾಶ ಪಡೆಯುವುದು ಅನುಮಾನ.