ಮುಂಬಯಿ: ಕನ್ನಡಿಗ ಮಯಾಂಕ್ ಅಗರ್ವಾಲ್(83) ಮತ್ತು ಯುವ ಆಟಗಾರ ವಿವ್ರಾಂತ್ ಶರ್ಮಾ(69) ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 200 ರನ್ ಗಳಿಸಿ ಸವಾಲೊಡ್ಡಿದೆ. ಪ್ಲೇ ಆಫ್ ಪ್ರವೇಶ ಪಡೆಯಬೇಕಾದರೆ ಮುಂಬೈಗೆ ಈ ಪಂದ್ಯ ಗೆಲ್ಲಲೇ ಬೇಕಿದೆ.
ಮುಂಬಯಿ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ. ಮುಂಬೈ ಗೆಲುವಿಗೆ 201 ರನ್ ಬಾರಿಸಬೇಕಿದೆ.
ಅಗರ್ವಾಲ್-ವಿವ್ರಾಂತ್ ಸ್ಫೋಟಕ ಬ್ಯಾಟಿಂಗ್
ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ಅಂತಿಮ ಪಂದ್ಯದಲ್ಲಿ ಸ್ಫೋಟಕ ಆಟವನ್ನು ತೋರ್ಪಡಿಸಿತು. ಇನಿಂಗ್ಸ್ ಆರಂಭಿಸಿದ ವಿವ್ರಾಂತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಮೈ ಚಳಿ ಬಿಟ್ಟು ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮುಂಬೈ ಬೌಲರ್ಗಳನ್ನು ಬೆಂಡೆತ್ತಿದ ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು.
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಈ ಜೋಡಿ ಮೊದಲ ವಿಕೆಟ್ಗೆ 140 ರನ್ ಒಟ್ಟುಗೂಡಿಸಿದರು. ವಿವ್ರಾಂತ್ ಶರ್ಮಾ ಅವರು 47 ಎಸೆತ ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 69 ರನ್ ಬಾರಿಸಿದರು. ಅಭಿಷೇಕ್ ಶರ್ಮ ಅವರ ಬದಲು ಆಡಲಿಳಿದ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಈ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಇಳಿದ ಕಳೆದ ಪಂದ್ಯದ ಶತಕ ವೀರ ಹೆನ್ರಿಚ್ ಕ್ಲಾಸೆನ್ 18 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು.
ಇದನ್ನೂ ಓದಿ IPL 2023: ಬೆಂಗಳೂರಿನಲ್ಲಿ ಭಾರಿ ಮಳೆ; ಆರ್ಸಿಬಿ ಅಭಿಮಾನಿಗಳಿಗೆ ಆತಂಕ
ಈ ಸೀಸನ್ನಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಮಯಾಂಕ್ ಅಗರ್ವಾಲ್ ಅವರು ಕೊನೆಯ ಲೀಗ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಶತಕದತ್ತ ಮುನ್ನುಗುತ್ತಿದ್ದ ಅವರನ್ನು ಆಕಾಶ್ ಮಧ್ವಲ್ ಔಟ್ ಮಾಡಿದರು. 83 ರನ್ ಬಾರಿಸಿದ ಅಗರ್ವಾಲ್ 8 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್ ಬಾರಿಸಿದರು. ಅಗರ್ವಾಲ್ ಮತ್ತು ವಿವ್ರಾಂತ್ ವಿಕೆಟ್ ಪತನದ ಬಳಿಕ ತಂಡದ ರನ್ ವೇಗವೂ ಕುಂಠಿತಗೊಂಡಿತು. ಆರಂಭದಲ್ಲಿ ಉಭಯ ಆಟವನ್ನು ಕಂಡಾಗ ತಂಡ 220 ಗಡಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಳಿಕ ಬಂದ ಆಟಗಾರರೆಲ್ಲ ವಿಕೆಟ್ ಒಪ್ಪಿಸಿ ತಂಡದ ದೊಡ್ಡ ಮೊತ್ತಕ್ಕೆ ಹಿನ್ನಡೆ ಉಂಟು ಮಾಡಿದರು. ನ್ಯೂಜಿಲ್ಯಾಂಡ್ ತಂಡದ ಸ್ಫೋಟಕ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಒಂದು ರನ್ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ ನಾಯಕ ಮಾರ್ಕ್ರಮ್ ಸಿಕ್ಸರ್ ಬಾರಿಸಿ ತಂಡದ ಮೊತ್ತ 200ಕ್ಕೆ ಏರಿಸಿದರು.