Site icon Vistara News

IPL 2023: ಕನ್ನಡಿಗ ರಾಹುಲ್​ vs ರಾಯಲ್​ ಚಾಲೆಂಜರ್ಸ್​ ಬೆಂಗಳೂರು

IPL 2023: Kannadiga Rahul vs Royal Challengers Bangalore

IPL 2023: Kannadiga Rahul vs Royal Challengers Bangalore

ಬೆಂಗಳೂರು: ಕೆಕೆಆರ್​ ವಿರುದ್ಧ ಹೀನಾಯ ಸೋಲು ಕಂಡ ಆರ್​ಸಿಬಿ(Royal Challengers Bangalore) ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು(ಸೋಮವಾರ ಎಪ್ರಿಲ್​ 10) ನಡೆಯುವ ಐಪಿಎಲ್​ನ 15ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್​. ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ಜೈಂಟ್ಸ್(Lucknow Super Giants)​ ವಿರುದ್ಧ ಕಣಕ್ಕಿಳಿಯಲಿದೆ. ಹೆಸರಿಗೆ ಮಾತ್ರ ಕನ್ನಡಿಗರ ತಂಡವಾದ ಆರ್​ಸಿಬಿಗೆ ಇದು ಎರಡನೇ ತವರಿನ ಪಂದ್ಯ. ಆದರೆ ಲಕ್ನೋ ನಾಯಕ ಕೆ.ಎಲ್‌. ರಾಹುಲ್‌ ಅವರಿಗೆ ಇದು ತವರು ಪಂದ್ಯ ಎಂಬುದು ಈ ಪಂದ್ಯದ ವಿಶೇಷ.

ಆರ್​ಸಿಬಿ ಮೇಲೆ ನಂಬಿಕೆ ಕಷ್ಟ

ತಂಡದದಲ್ಲಿ ಸ್ಟಾರ್​ ಆಟಗಾರರೇ ತುಂಬಿಕೊಂಡಿದ್ದರೂ ಆರ್​ಸಿಬಿ ಮೇಲೆ ನಂಬಿಕೆ ಇಡುವುದು ಕಷ್ಟ. ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾಗ ಅಭಿಮಾನಿಗಳು ಈ ಸಲ ಆರ್​ಸಿಬಿ ಕಪ್​ ಗೆಲ್ಲಲಿದೆ ಎಂಬ ದೃಢ ನಂಬಿಕೆಯೊಂದನ್ನು ಇರಿಸಿದ್ದರು. ಆದರೆ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಅಭಿಮಾನಿಗಳಲ್ಲಿ ತಂಡದ ಮೇಲಿದ್ದ ನಂಬಿಕೆ ಕೊಂಚ ಕಡಿಮೆಯಾಗಿದೆ. ಆರ್​ಸಿಬಿ ಕಳೆದ 15 ಆವೃತ್ತಿಗಳಲ್ಲಿಯೂ ಒಮ್ಮೆ 200ರ ಗಡಿ ದಾಟಿ ಮತ್ತೊಮ್ಮೆ 100ರೊಳಗೆ ಗಂಟುಮೂಟೆ ಕಟ್ಟುವುದು ಸರ್ವೆ ಸಾಮಾನ್ಯ. ಹೀಗಾಗಿ ಆರ್​ಸಿಬಿ ಮೇಲೆ ನಿರೀಕ್ಷೆ ಇರಿಸುವುದು ಕಷ್ಟ ಸಾಧ್ಯ. ಡು ಪ್ಲೆಸಿಸ್‌, ಕೊಹ್ಲಿ ಹೊರತುಪಡಿಸಿದರೆ ನಿಂತು ಆಡುವವರು ಇಲ್ಲ. ಇವರಿಬ್ಬರು ಬೇಗ ಪೆವಿಲಿಯನ್‌ ಸೇರಿಕೊಂಡರೆ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು ಸದ್ಯಕ್ಕೆ ಕಾಣುತ್ತಿಲ್ಲ.

ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೈಕಲ್‌ ಬ್ರೇಸ್‌ವೆಲ್‌, ದಿನೇಶ್‌ ಕಾರ್ತಿಕ್‌ ಪ್ರಮುಖ ಆಟಗಾರರಾಗಿದ್ದರೂ ಇದುವರೆಗೆ ಇವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡುಬಂದಿಲ್ಲ. ಕೇವಲ ಒಂದು ಅಥವಾ 2 ಸಿಕ್ಸರ್​ಗಳಿಗಷ್ಟೇ ಸೀಮಿತವಾಗಿದ್ದಾರೆ. ದೊಡ್ಡ ಇನಿಂಗ್ಸ್​ ಕಂಡುಬಂದಿಲ್ಲ. ಈ ಪಂದ್ಯದಲ್ಲಿಯೂ ಇವರು ಬ್ಯಾಟಿಂಗ್​ ವೈಫಲ್ಯ ಕಂಡರೆ ಆರ್​ಸಿಬಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.

ಲಕ್ನೋ ಬಲಿಷ್ಠ ತಂಡ

ರಾಹುಲ್​ ಸಾರಥ್ಯದ ಲಕ್ನೋ ತಂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಸಮರ್ಥವಾಗಿದೆ. ಅದರಲ್ಲೂ ವಿಂಡೀಸ್​ನ ಕೈಲ್​ ಮೇಯರ್ಸ್​ ಮತ್ತು ನಿಕೋಲಸ್​ ಪೂರನ್​ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣ ಚಿಕ್ಕದಾಗಿರುವುದರಿಂದ ಒಂದೊಮ್ಮೆ ಉಭಯ ಆಟಗಾರರು ಸಿಡಿದು ನಿಂತರೆ ಸಿಕ್ಸರ್​ಗಳ ಸುರಿಮಳೆ ಸುರಿಯುವುದು ಖಚಿತ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಮಾರ್ಕ್​ ವುಡ್​ ಮತ್ತೆ ಈ ಪಂದ್ಯದಲ್ಲಿ ಆಡಲಿದ್ದಾರೆ. ಸದ್ಯ ಡಿ ಕಾಕ್​ ಅವರು ಈ ಪಂದ್ಯದಲ್ಲಿ ಅವಕಾಶ ಪಡೆದರೆ ಯಾರನ್ನು ಕೈ ಬಿಡುವುದು ಎನ್ನುವುದೇ ತಂಡದ ಚಿಂತೆಯಾಗಿದೆ. ಬೌಲಿಂಗ್​ನಲ್ಲಿ ಅತ್ಯುತ್ತಮ ದರ್ಜೆಯ ಸ್ಪಿನ್ನರ್‌ಗಳನ್ನೂ ತಂಡ ಹೊಂದಿದೆ. ಕೃಣಾಲ್‌ ಪಾಂಡ್ಯ ರವಿ ಬಿಷ್ಣೋಯಿ, ಅಮಿತ್‌ ಮಿಶ್ರಾ ಉತ್ತಮ ಲಯದಲ್ಲಿದ್ದಾರೆ.

ಇದನ್ನೂ ಓದಿ IPL 2023: ಕೆಕೆಆರ್​, ಹೈದರಾಬಾದ್‌​ಗೆ ಗೆಲುವು;​ ಅಂಕಪಟ್ಟಿ ಹೇಗಿದೆ?

ವಾಹನ ಸಂಚಾರ ಮಾರ್ಗ ಬದಲಾವಣೆ

ಈ ಹೈ ವೋಲ್ಟೇಜ್ ಪಂದ್ಯ ನೋಡಲು ಹೆಚ್ಚಿನ ಕ್ರೀಡಾಭಿಮಾನಿಗಳು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳು ಮೈದಾನದೊಳಗೆ ಹೋಗಲು ಅನುಕೂಲ ಆಗುವಂತೆ ವಾಹನ ಸಂಚಾರ ಮಾರ್ಗವನ್ನು ಬದಲಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶಿದ್ದಾರೆ.

ಸಂಜೆ 4 ರಿಂದ ರಾತ್ರಿ 10ರವರೆಗೆ ನಿರ್ಬಂಧ

ಈ ರಸೆಯಲ್ಲಿ ಪಂದ್ಯ ನೋಡಲು ವಿವಿದೆಡೆಯಿಂದ ಜನರು ಬರುವುದರಿಂದ ಸಾರ್ವಜನಿಕರ ಸಾಮಾನ್ಯ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಚಿನ್ನಸ್ವಾಮಿ ಮೈದಾನದ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚಾರ ಮಾಡಲು ಅನುಕೂಲ ಮಾಡಲಾಗಿದೆ. ಮಾರ್ಗ ಬದಲಾವಣೆಯು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಇರಲಿದೆ. ಪಂದ್ಯ ಮುಕ್ತಾಯದ ನಂತರ ಎಂದಿನಂತೆ ಎಲ್ಲ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Exit mobile version