ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗ ವೈಶಾಖ್ ವಿಜಯ್ಕುಮಾರ್ಗೆ(visakh vijayakumar) ಅವಕಾಶ ನೀಡಿದೆ. ಮಧ್ಯಮ ವೇಗಿ ಆಗಿರುವ ವೈಶಾಖ್ಗೆ ಇದು ಪದಾರ್ಪಣ ಐಪಿಎಲ್(IPL 2023) ಪಂದ್ಯವಾಗಿದೆ. ಡೆಲ್ಲಿ ವಿರುದ್ಧ ಆಡುವ ಬಳಗದಲ್ಲಿ ಅವಕಾಶ ಪಡೆದಿರುವ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ “ನಮ್ಮ ಕನ್ನಡದ ಹುಡುಗ” ಇಂದು ಆಡಲಿದ್ದಾರೆ ಎಂದು ಬರೆದುಕೊಂಡಿದೆ.
ಪಾದದ ನೋವಿಗೆ ಒಳಗಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ರಜತ್ ಪಾಟೀದಾರ್ ಬದಲು ಅವರು ಆರ್‌ಸಿಬಿ ತಂಡ ಸೇರಿದ್ದರು. ಇದೀಗ ಆಡುವ ಅವಕಾಶವನ್ನು ಪಡೆದಿದ್ದಾರೆ. ಅದೂ ಕೂಡ ತಾವು ಆಡಿ ಬೆಳೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು ಚೊಚ್ಚಲ ಪಂದ್ಯವನ್ನಾಡುತ್ತಿರುವುದು ವಿಶೇಷ. ಸದ್ಯ ಆರ್‌ಸಿಬಿ ಬ್ಯಾಟಿಂಗ್ ನಡೆಸುತ್ತಿದ್ದು ಉತ್ತಮವಾಗಿ ಆಡುತ್ತಿದೆ. ಈ ಪಂದ್ಯದಲ್ಲಿ ವೈಶಾಖ್ ವಿಜಯ್‌ಕುಮಾರ್ ಯಾವ ರೀತಿಯ ಪ್ರದರ್ಶನ ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2023 : ಲಕ್ನೊ ಸೂಪರ್ ಜಯಂಟ್ಸ್ ತಂಡ ಸೇರಿದ ಯುವ ಬೌಲರ್ ಅರ್ಪಿತ್ ಗುಲೇರಿಯಾ
26 ವರ್ಷದ ಕರ್ನಾಟಕ ತಂಡದ ಪ್ರಮುಖ ವೇಗಿ ಆಗಿರುವ ವೈಶಾಖ್ ಇದುವರೆಗೆ 10 ಪ್ರಥಮ ದರ್ಜೆ ಪಂದ್ಯಗಳಿಂದ ಒಟ್ಟು 38 ವಿಕೆಟ್ ಕಬಳಿಸಿದ್ದಾರೆ. 7 ಲೀಸ್ಟ್ ‘ಎ’ ಪಂದ್ಯಗಳಿಂದ 11 ವಿಕೆಟ್, 14 ಟಿ20 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ. ವೈಶಾಖ್ ಈ ಹಿಂದೆ ಕರ್ನಾಟಕ, ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ಪರ ಆಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರೋವ್ಮನ್ ಪೋವೆಲ್ ಬದಲಿಗೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಅವಕಾಶ ಪಡೆದರು. ಇನ್ನೊಂದೆಡೆ ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ವನಿಂದು ಹಸರಂಗ ಮತ್ತು ವೈಶಾಖ್ ವಿಜಯ್‌ಕುಮಾರ್ ಈ ಪಂದ್ಯದಲ್ಲಿ ಆಡಲಿಳಿದರು.