ಕೋಲ್ಕತ್ತಾ: ಭಾನುವಾರ ರಾತ್ರಿ ಕೋಲ್ಕೊತಾದಲ್ಲಿ ನಡೆದ ಐಪಿಎಲ್9IPL 2023) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. ಆದರೆ ಪಂದ್ಯದ ಬಳಿಕ ಮಾತನಾಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ತಮ್ಮ ಐಪಿಎಲ್ ವಿದಾಯದ ಬಗ್ಗೆ ಪುನರುಚ್ಚರಿಸಿದ್ದಾರೆ.
ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಮೊತ್ತದ ಮೇಲಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿ ಹೋದ ಕೆಕೆಆರ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಪಂದ್ಯವನ್ನು ನೋಡಲು ಧೋನಿಯ ಅಭಿಮಾನಿಗಳು ದಾಖಲೆಯ ಸಂಖ್ಯೆಯ ಬಂದಿದ್ದರು. ಈಡನ್ ಗಾರ್ಡನ್ಸ್ ಸ್ಟೇಡಿಯಂ ಫುಲ್ ಹಳದಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಪಂದ್ಯದ ಕೊನೆಯ ವರೆಗೂ ಧೋನಿ…ಧೋನಿ ಎಂಬ ಹರ್ಷೋದ್ಗಾರ ಮೊಳಗಿತು. ಇದೇ ವಿಚಾರವಾಗಿ ಪಂದ್ಯದ ಬಳಿಕ ಮಾತನಾಡಿದ ಧೋನಿ, “ನನಗೆ ಬೆಂಬಲ ಸೂಚಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ. ಇದರಲ್ಲಿ ಹೆಚ್ಚಿನವರು ಮುಂದಿನ ಬಾರಿ ಕೆಕೆಆರ್ ಜೆರ್ಸಿಯಲ್ಲಿ ಪಂದ್ಯ ವೀಕ್ಷಿಸಲು ಬರುತ್ತಾರೆ” ಎಂದು ಹೇಳುವ ಮೂಲಕ ತಮ್ಮ ವಿದಾಯದ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಕಳೆದ ಹೈದರಾಬಾದ್ ವಿರುದ್ಧದ ಪಂದ್ಯದದ ವೇಳೆಯೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದರು. ‘ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದೇನೆ. ಆದರೆ ಹೆಚ್ಚು ಸಮಯ ನಾನು ಆಡಿದಂತೆ ಅದನ್ನು ಆನಂದಿಸುವುದು ಮುಖ್ಯ’ ಎಂದು ಹೇಳಿದ್ದರು. ಇನ್ನು ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನೇ ಧೋನಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗಿತ್ತು. ಇದೇ ವಿಚಾರವನ್ನು ಸ್ವತಃ ಫ್ರಾಂಚೈಸಿಯೂ ಕೂಡ ಹೇಳಿತ್ತು. ಧೋನಿ ವಿದಾಯಕ್ಕೆ ಎಲ್ಲ ಸಿದ್ಧತೆ ನಡೆದಿದೆ ಎಂದು ತಿಳಿಸಿತ್ತು.