Site icon Vistara News

IPL 2023 | ಆಲ್​ರೌಂಡರ್​ ರವೀಂದ್ರ ಜಡೇಜಾಗಾಗಿ ಪಟ್ಟು ಹಿಡಿದ ಮಹೇಂದ್ರ ಸಿಂಗ್ ಧೋನಿ

ipl

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆಲ್​ ಆಲ್‌ರೌಂಡರ್ ರವೀಂದ್ರ ಜಡೇಜಾ ನಡುವಿನ ಸಂಬಂಧ ಹದಗೆಟ್ಟಿರುವುದಾಗಿ ಕಳೆದ 6 ತಿಂಗಳಿನಿಂದ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಂತೆ ಕೆಲ ದಿನಗಳ ಹಿಂದೆ ಜಡೇಜಾ ಮುಂದಿನ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಲಿದ್ದಾರೆ ಎಂಬ ಸುದ್ದಿಯೂ ಎಲ್ಲಡೆ ಹರಿದಾಡಿತ್ತು. ಆದರೆ ಇದೀಗ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಈ ಎಲ್ಲ ವದಂತಿಗಳಿಗೆ ತೆರೆ ಎಳೆಯಲು ಮುಂದಾಗಿದ್ದು, ಜಡೇಜಾರನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿಯೇ ಉಳಿಸಿಕೊಳ್ಳಲು ಫ್ರಾಂಚೈಸಿ ಮುಂದೆ ಪಟ್ಟುಹಿಡಿದಿದ್ದಾರೆ ಎಂದು ವರದಿಯಾಗಿದೆ.

ಕಳೆದ ಐಪಿಎಲ್‌ನ ಮೊದಲಾರ್ಧದಲ್ಲಿ ಚೆನ್ನೈ ತಂಡ ಜಡೇಜಾ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಜಡೇಜಾರನ್ನು ಐಪಿಎಲ್ ಮಧ್ಯದಲ್ಲಿಯೇ ನಾಯಕತ್ವದಿಂದ ಕೇಳಗಿಳಿಸಿ, ಮತ್ತೆ ಧೋನಿಗೆ ನಾಯಕತ್ವ ವಹಿಸಲಾಗಿತ್ತು. ಇದರಿಂದ ಬೇಸರಗೊಂಡ ಜಡೇಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿಎಸ್​ಕೆಗೆ ಸಂಬಂಧಿಸಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಆಗಿನಿಂದ ಫ್ರಾಂಚೈಸಿ ಹಾಗೂ ಜಡೇಜಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ವದಂತಿ ಎಲ್ಲಡೆ ಹಬ್ಬಿತ್ತು.

ಐಪಿಎಲ್​ನ 10 ತಂಡಗಳಿಗೂ ನವೆಂಬರ್ 15 ಆಟಗಾರರ ವರ್ಗಾವಣೆಗೆ ಕೊನೆಯ ದಿನಾಂಕವಾಗಿದ್ದು, ತಂಡದಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರ ಹಾಗೂ ಬಿಡುಗಡೆಗೊಳಿಸಬೇಕಾದ ಆಟಗಾರರ ಬಗ್ಗೆ ಎಲ್ಲ ತಂಡಗಳು ಮಾಹಿತಿ ನೀಡಬೇಕಿದೆ. ಅದರಂತೆ ಚೆನ್ನೈ ಪಾಳಯದಲ್ಲಿಯೂ ಚರ್ಚೆ ಆರಂಭವಾಗಿದೆ. ಈ ಮುನ್ನ ಜಡೇಜಾರನ್ನು ಸಿಎಸ್‌ಕೆ ಬೇರೆ ತಂಡಕ್ಕೆ ವರ್ಗಾಯಿಸಲಿದೆ ಎಂದು ವರದಿಯಾಗಿತ್ತು. ಆದರೆ ಈಗ ಫ್ರಾಂಚೈಸಿ, ಜಡೇಜಾ ಅವರನ್ನು ಬೇರೊಂದು ತಂಡಕ್ಕೆ ವರ್ಗಾಯಿಸುವುದಿಲ್ಲ ಎಂದು ತಿಳಿದುಬಂದಿದೆ.

ಜಡೇಜಾ ಅವರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಹೊಂದಿರುವ ತಂಡದ ನಾಯಕ ಧೋನಿ, ಜಡೇಜಾ ಬಗ್ಗೆ ತನ್ನ ನಿಲುವುನ್ನು ಫ್ರಾಂಚೈಸಿ ಮುಂದೆ ಸ್ಪಷ್ಟಪಡಿಸಿದ್ದು, ಜಡೇಜಾ ಅವರನ್ನು ತಂಡದಿಂದ ಬಿಡುಗಡೆ ಮಾಡುವುದು ಸರಿಯಿಲ್ಲ. ಅಲ್ಲದೆ ಜಡೇಜಾ ತಂಡದ ಪ್ರಮುಖ ಆಟಗಾರನಾಗಿದ್ದು, ಅವರ ಸ್ಥಾನವನ್ನು ಬೇರೆ ಯಾವುದೇ ಆಟಗಾರರಿಂದ ತುಂಬಲು ಸಾಧ್ಯವಿಲ್ಲ ಎಂದು ಧೋನಿ ಅವರು ಫ್ರಾಂಚೈಸಿ ಜತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

33 ವರ್ಷದ ಜಡೇಜಾ ಒಟ್ಟು 210 ಐಪಿಎಲ್​ ಪಂದ್ಯವಾಡಿದ್ದು, 2502 ರನ್​​ ಹಾಗೂ 132 ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ | T20 World Cup | ಐರ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್​ ತಲುಪಿದ ನ್ಯೂಜಿಲೆಂಡ್​

Exit mobile version