Site icon Vistara News

IPL 2023 | ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಪಾಲಾದ ಶಾರ್ದೂಲ್‌ ಠಾಕೂರ್‌

ನವ ದಹಲಿ : ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್‌ ಮುಂದಿನ ಆವೃತ್ತಿಯ ಐಪಿಎಲ್‌ಗೆ (IPL 2023) ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಪರ ಅಡಲಿದ್ದಾರೆ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರವಾಗಿ ಆಡಿದ್ದ ಅವರನ್ನು ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡ ಸೋಮವಾರ ಟ್ರೇಡ್‌ ಮಾಡಿಕೊಂಡು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಶಾರ್ದುಲ್‌ ಅವರನ್ನು ತಮ್ಮ ತಂಡಕ್ಕೆ ತೆಗೆದುಕೊಳ್ಳುವುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್‌, ಪಂಜಾಬ್‌ ಕಿಂಗ್ಸ್‌ ಹಾಗೂ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ತಂಡವೂ ಆಸಕ್ತಿ ತೋರಿತ್ತು. ಆದರೆ, ಅವರ ಡೀಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಪ್ಪದ ಕಾರಣ ಅಂತಿಮವಾಗಿ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಪಾಲಾಗಿದ್ದಾರೆ.

ಶಾರ್ದುಲ್‌ ಠಾಕೂರ್‌ ಅವರು ೨೦೨೧ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರವಾಗಿ ಆಡಿದ್ದರು. ಆ ಬಳಿಕ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ೨೦೨೨ರ ಐಪಿಎಲ್‌ನ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಬಳಗ ೧೦.೭೫ ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ ಅವರು ಪ್ರದರ್ಶನ ಪಡೆದ ಮೊತ್ತಕ್ಕೆ ಪೂರಕವಾಗಿ ಇರಲಿಲ್ಲ. ೧೪ ಪಂದ್ಯಗಳಲ್ಲಿ ೯.೭೯ ಎಕಾನಮಿ ಪ್ರಕಾರ ೧೫ ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದರು. ೧೩೮ ಸ್ಟ್ರೈಕ್‌ ರೇಟ್‌ನಲ್ಲಿ ೧೩೮ ರನ್‌ ಮಾತ್ರ ಬಾರಿಸಿದ್ದರು.

ಬೌಲಿಂಗ್‌ ಆಲ್‌ರೌಂಡರ್‌ ಶಾರ್ದುಲ್‌ ಅವರು ಇದೀಗ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಅಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ಕೋಲ್ಕೊತಾ ನೈಟ್‌ ರೈಡರ್ಸ್‌ ಫ್ರಾಂಚೈಸಿಯ ಮನಗೆಲ್ಲಬೇಕಾಗಿದೆ.

ಇದರೊಂದಿಗೆ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡ ಒಟ್ಟಾರೆ ಮೂರು ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ. ಈ ಹಿಂದೆ ಗುಜರಾತ್‌ ಟೈಟನ್ಸ್‌ ತಂಡದಿಂದ ವೇಗಿ ಲಾಕಿ ಫರ್ಗ್ಯೂಸನ್‌ ಹಾಗೂ ಅಫಘಾನಿಸ್ತಾನದ ವಿಕೆಟ್‌ಕೀಪರ್‌ ಬ್ಯಾಟರ್‌ ರಹ್ಮನುಲ್ಲಾ ಗುರ್ಬಜ್‌ ಅವರನ್ನು ತಂಡಕ್ಕೆ ತೆಗೆದುಕೊಂಡಿತ್ತು.

ಶಾರ್ದುಲ್‌ ಠಾಕೂರ್‌ ಐಪಿಎಲ್‌ನಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿದ್ದು, ೨೦೧೮ ಹಾಗೂ ೨೦೨೧ರಲ್ಲಿ ಆ ತಂಡ ಚಾಂಪಿಯನ್‌ಪಟ್ಟ ಅಲಂಕರಿಸಿದ್ದಾಗ ಅವರು ಅ ತಂಡದ ಭಾಗವಾಗಿದ್ದರು.

ಇದನ್ನೂ ಓದಿ | T20 World Cup | ನನ್ನ ಈ ಸಾಧನೆಗೆ ಐಪಿಎಲ್​ ಕಾರಣ; ಸರಣಿ ಶ್ರೇಷ್ಠ ವಿಜೇತ ಸ್ಯಾಮ್​ ಕರನ್​

Exit mobile version