ಅಹಮದಾಬಾದ್: ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಷನಲ್ ಶುಭಮನ್ ಗಿಲ್(Shubman Gill) ಅವರು ಐಪಿಎಲ್(IPL 2023)ಟೂರ್ನಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಕಳೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗಿಲ್ ಅವರು ಅರ್ಧಶತಕ ಬಾರಿಸುವ ಮೂಲಕ ಸಚಿನ್ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡ ಸನ್‌ರೈಸರ್ ಹೈದರಾಬಾದ್‌ಗೆ 34 ರನ್ನುಗಳ ಸೋಲುಣಿಸಿ ಪ್ಲೇ ಆಫ್ಗೆ ಲಗ್ಗೆಯಿಟ್ಟಿತು. ಸೋಲುಂಡ ಹೈದರಾಬಾದ್ ಕೂಟದಿಂದ ಹೊರಬಿತ್ತು.
ಈ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಶುಭಮನ್ ಗಿಲ್ ಅವರು ತಮ್ಮ ಅರ್ಧಶತಕವನ್ನು ಪೂರೈಸುವ ವೇಳೆ ಸಚಿನ್ ದಾಖಲೆಯೊಂದನ್ನು ಮುರಿದರು. ಐಪಿಎಲ್ನಲ್ಲಿ ಸಿಕ್ಸರ್ ಬಾರಿಸದೇ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ದಾಖಲೆಯೊಂದನ್ನು ಗಿಲ್ ತಮ್ಮ ಹೆಸರಿಗೆ ಬರೆದರು. ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರು 2010ರಲ್ಲಿ ಡೆಲ್ಲಿ ವಿರುದ್ಧ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ವೇಳೆ ಅವರು ಒಂದೇ ಒಂದು ಸಿಕ್ಸ್ ಬಾರಿಸಿರಲಿಲ್ಲ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗಿಲ್ ಒಂದೇ ಒಂದು ಸಿಕ್ಸ್ ಸಿಡಿಸದೇ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸಚಿನ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಅಳಿಸಿ ಹಾಕಿದರು.
ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಗಿಲ್ 56 ಎಸೆತಗಳಲ್ಲಿ ಚೊಚ್ಚಲ ಐಪಿಎಲ್ ಶತಕ ಬಾರಿಸಿ ಸಂಭ್ರಮಿಸಿದರು. ಇದರೊಂದಿಗೆ ಗುಜರಾತ್ ಪರ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.
ಇದನ್ನೂ ಓದಿ IPL 2023: ಮುಂಬಯಿ ಇಂಡಿಯನ್ಸ್ ವಿರುದ್ಧ ಲಕ್ನೊ ತಂಡ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಈ ರೀತಿ ಇದೆ
ಕೆಲ ದಿನಗಳ ಹಿಂದಷ್ಟೇ ಗಿಲ್ ಅವರು ಐಪಿಎಲ್ ಕ್ರಿಕೆಟ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ 2 ಸಾವಿರ ರನ್ ಪೂರೈಸಿದ ದ್ವಿತೀಯ ಆಟಗಾರ ಎಂಬ ಸಾಧನೆ ಮಾಡಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಶುಭಮನ್ ಗಿಲ್ 23ರನ್ ಗಳಿಸಿದ ವೇಳೆ ಐಪಿಎಲ್ನಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದ್ದರು. ರಿಷಭ್ ಪಂತ್ ಅವರು 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್ ಅವರು 23 ವರ್ಷ 214 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ.