ಮುಂಬಯಿ: ಕಳೆದ ಎರಡು ಆವೃತ್ತಿಗಳಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್(Arjun Tendulkar) ಕೊನೆಗೂ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಇದೇ ಸಂತಸದಲ್ಲಿ ಅರ್ಜುನ್ ತೆಂಡೂಲ್ಕರ್ ಅವರ ಅಕ್ಕ ಸಾರಾ ತೆಂಡೂಲ್ಕರ್ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
ಕೋಲ್ಕತಾ ನೈಟ್ ರೇಡರ್ಸ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯುವ ಮೂಲಕ ಅರ್ಜುನ್ ತೆಂಡೂಲ್ಕರ್ ಅವರು ಐಪಿಎಲ್ಗೆ ಪದಾರ್ಪಣೆ ಮಾಡಿದರು. ರೋಹಿತ್ ಶರ್ಮ ಅವರು ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡರು. ತಮ್ಮನ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಅಕ್ಕ ಸಾರಾ ತೆಂಡೂಲ್ಕರ್ ಕೂಡ ಉಪಸ್ಥಿತರಿದ್ದರು. ಇದೇ ವೇಳೆ ಅವರು ತಮ್ಮನ ಈ ಸಾಧನೆ ಕಂಡು “ಇದು ನಿನ್ನ ಸಹೋದರಿಯಾಗಿ ನನಗೆ ಅತ್ಯಂತ ಸಂತೋಷದ ಕ್ಷಣ” ಎಂದು ಬರೆದು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ.
ಇದನ್ನೂ ಓದಿ IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮತ್ತೊಬ್ಬ ಕನ್ನಡಿಗನಿಗೆ ಸಿಗುತ್ತಾ ಅವಕಾಶ?
ಅರ್ಜುನ್ ತೆಂಡುಲ್ಕರ್ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್ ಬೌಲಿಂಗ್ ಮಾಡಿ ಗಮನ ಸೆಳೆದರು. ಸ್ವಿಂಗ್ ಬೌಲಿಂಗ್ ಮೂಲಕ ಉತ್ತಮ ಪ್ರದರ್ಶನ ತೋರಿದ ಅರ್ಜುನ್ ತೆಂಡುಲ್ಕರ್ ಎರಡು ಓವರ್ ಬೌಲಿಂಗ್ ಮಾಡಿ 17 ರನ್ ನೀಡಿದರು. ಆದರೆ ವಿಕೆಟ್ ಕಬಳಿಸುವಲ್ಲಿ ವಿಫಲರಾದರು. ಕಳೆದ ವರ್ಷ ಮೆಗಾ ಹರಾಜಿನಲ್ಲಿ 30 ಲಕ್ಷಕ್ಕೆ ಬಿಡ್ ಮಾಡುವ ಮೂಲಕ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ರೀಟೈನ್ ಮಾಡಿತ್ತು. ಈ ಹಿಂದೆ 2021ರಲ್ಲಿ ಮುಂಬೈ ತಂಡವು ಅವರನ್ನು 20 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು.
ಮುಂಬೈಗೆ 5 ವಿಕೆಟ್ ಗೆಲುವು
ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ 17.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಬಾರಿಸಿ ಗೆಲುವು ದಾಖಲಿಸಿತು. ಈ ಮೂಲಕ ಮುಂಬೈ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿತು.