ಮುಂಬಯಿ: ಗುಜರಾತ್ ಟೈಟನ್ಸ್ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಅವರು ಐಪಿಎಲ್ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ. ಕಳೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 83 ರನ್ ಬಾರಿಸಿದ್ದು ಸೂರ್ಯಕುಮಾರ್ ಅವರ ಐಪಿಎಲ್ನ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಆದರೆ ಇದೀಗ ಶತಕ ಬಾರಿಸುವ ಮೂಲಕ ತಮ್ಮ ವೈಯಕ್ತಿಕ ಗರಿಷ್ಠ ಮೊತ್ತವನ್ನು ಹೆಚ್ಚಿಸಿದ್ದಾರೆ.
ನಟರಾಜ ಭಂಗಿಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ವಾಂಖೇಡೆ ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿ ಬಾರಿಸಿ 31 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಅಂತಿಮ ಹಂತದವರೆಗೂ ಬ್ಯಾಟಿಂಗ್ ಕಾಯ್ದುಕೊಂಡ ಅವರು ಗುಜರಾತ್ ಬೌಲರ್ಗಳನ್ನು ಚೆಂಡಾಡಿ ಶತಕ ಬಾರಿಸಿ ಮಿಂಚಿದರು. 49 ಎಸೆತ ಎದುರಿಸಿದ ಅವರು ಬರೋಬ್ಬರಿ 11 ಬೌಂಡರಿ ಮತ್ತು 6 ಸಿಕ್ಸರ್ ನರೆವಿನಿಂದ ಅಜೇಯ 103 ರನ್ ಗಳಿಸಿದರು. ಈ ಮೂಲಕ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು.
ಇದನ್ನೂ ಓದಿ IPL 2023: ಸೂರ್ಯ ಪ್ರತಾಪಕ್ಕೆ ಬಸವಳಿದ ಗುಜರಾತ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿ, ಬಳಿಕ ಐಪಿಎಲ್ನ ಆರಂಭಿಕ ನಾಲ್ಕು ಪಂದ್ಯಗಳಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡಾಗ ಸೂರ್ಯಕುಮಾರ್ ಟೀಕೆಗೆ ಒಳಗಾಗಿದ್ದರು. ಕೆಲವರಂತು ಸೂರ್ಯ ಅವರ ಆಟ ಇನ್ನು ಮುಂದೆ ನಡೆಯುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ತಮ್ಮ ವಿರುದ್ಧ ಟೀಕೆ ಮಾಡಿದವರಿಂದಲೇ ಹೊಗಳಿಸಿಕೊಳ್ಳುವಷ್ಟರ ಮಟ್ಟಿಗೆ ಪ್ರತಿ ಪಂದ್ಯದಲ್ಲಿಯೂ ಶ್ರೇಷ್ಠ ಬ್ಯಾಟಿಂಗ್ ತೋರ್ಪಡಿಸುತ್ತಿದ್ದಾರೆ. ಸದ್ಯ ಅವರ ಬ್ಯಾಟಿಂಗ್ ಫಾರ್ಮ್ ಗಮನಿಸುವಾಗ ಭಾರತದಲ್ಲಿಯೇ ನಡೆಯುವ ಏಕದಿನ ವಿಶ್ವಕಪ್ ತಂಡಕ್ಕೂ ಆಯ್ಕೆಯಾಗುವ ಸಾಧ್ಯತೆ ಇದೆ.