Site icon Vistara News

IPL 2023: ಡಿಜಿಟಲ್​ ವೀಕ್ಷಣೆಯಲ್ಲಿ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Royal Challengers Bangalore ,Chennai Super Kings

Royal Challengers Bangalore ,Chennai Super Kings

ಬೆಂಗಳೂರು: ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಆರ್​ಸಿಬಿ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚಿನ ವೀಕ್ಷಣೆ ಕಾಣುವ ಮೂಲಕ ಡಿಜಿಟಲ್​ ಮಾಧ್ಯಮದಲ್ಲಿ ದಾಖಲೆಯೊಂದನ್ನು ಬರೆದಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಮಹೇಂದ್ರ ಸಿಂಗ್ ಧೋನಿ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಅತ್ಯಂತ ರೋಚಕವಾಗಿ ನಡೆದ ಈ ಪಂದ್ಯದ ಅಂತಿಮ ಓವರ್​ ಏಕಕಾಲದಲ್ಲಿ 2.4 ಕೋಟಿ ಸಂಖ್ಯೆಯಲ್ಲಿ ವೀಕ್ಷಣೆ ಕಂಡು ಎಲ್ಲ ದಾಖಲೆಗಳನ್ನು ಮುರಿದಿದೆ. ಈ ವಿಚಾರವನ್ನು ಜಿಯೋ ಸಿನಿಮಾ ಹೇಳಿಕೆಯಲ್ಲಿ ತಿಳಿಸಿದೆ. ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಎಂ.ಎಸ್ ಧೋನಿ ಬ್ಯಾಟಿಂಗ್ ಮಾಡುವ ವೇಳೆ ಜಿಯೋ ಸಿನಿಮಾ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆ ಪತನಗೊಂಡಿದೆ.

ಬೆಂಗಳೂರು ತಂಡದ ಪರ ನಾಯಕ ಫಾ ಡು ಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಧೋನಿ ಪಡೆಯ ಬೌಲರ್​ಗಳ ಎಸೆತವನ್ನು ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಧೂಳೀಪಟ ಮಾಡಿದರು. 3ನೇ ವಿಕೆಟಿಗೆ 61 ಎಸೆತಗಳಿಂದ 126 ರನ್‌ ಹರಿದು ಬಂತು. ಈ ಜೋಡಿಯ ಬ್ಯಾಟಿಂಗ್​ ಕಂಡ ಚೆನ್ನೈ ಅಭಿಮಾನಿಗಳು ಇನ್ನೇನು ಸೋಲು ಕಂಡೆವು ಎಂದು ಚಿಂತೆಯಲ್ಲಿದ್ದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಆರ್‌ಸಿಬಿ ಗೆಲುವಿನ ಸಾಧ್ಯತೆ ಕಡಿಮೆಗೊಂಡಿತು. ಚೆನ್ನೈ ಅಭಿಮಾನಿಗಳಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿತು. ಆದರೂ ಬಾಲಂಗೋಚಿಗಳು ಅಂತಿಮ ಹಂತದಲ್ಲಿ ನಡೆಸಿದ ಸಣ್ಣ ಹೋರಾಟದಿಂದ ಮತ್ತೆ ಪಂದ್ಯ ರೋಚಕತೆಗೆ ತಿರುಗಿತು. ಹೀಗಾಗಿ ಅಂತಿಮ ಓವರ್​ ಇಷ್ಟು ಸಂಖ್ಯೆಯ ದಾಖಲೆಯ ವೀಕ್ಷಣೆ ಕಾಣಲು ಸಾಧ್ಯವಾಯಿತು.

ಇದನ್ನೂ ಓದಿ IPL 2023: ಮುಂಬೈ ಎದುರು ಶೈನ್​ ಆದೀತೇ ಸನ್​ರೈಸರ್ಸ್​

ಅಂತಿಮವಾಗಿ ಮ್ಯಾಕ್ಸ್‌ವೆಲ್‌ 36 ಎಸೆತಗಳಿಂದ 76 ರನ್‌ ಚಚ್ಚಿದರೆ, ಡು ಪ್ಲೆಸಿಸ್‌ 33 ಎಸೆತಗಳಿಂದ 62 ರನ್‌ ಬಾರಿಸಿದರು (5 ಬೌಂಡರಿ, 4 ಸಿಕ್ಸರ್‌). ತಂಡ ಸಣ್ಣ ಅಂತರದಿಂದ ಸೋಲು ಕಂಡಿತು. ಆರ್​ಸಿಬಿ ಮುಂದಿನ ಪಂದ್ಯ ಏಪ್ರಿಲ್​​ 23ರಂದು ರಾಜಸ್ಥಾನ್​ ವಿರುದ್ಧ ಆಡಲಿಳಿದೆ.

Exit mobile version