ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿದೆ. ಆದರೆ ಪಂದ್ಯದಲ್ಲಿ ಆರ್ಸಿಬಿ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿದ್ದು ಮುಂಬೈ ತಂಡದ ಯುವ ಬ್ಯಾಟರ್ ನೆಹಾಲ್ ವಧೇರಾ(Nehal Wadhera) ಅವರು ಬಾರಿಸಿದ ಒಂದು ಸಿಕ್ಸರ್. ಪದಾರ್ಪಣ ಪಂದ್ಯದಲ್ಲಿಯೇ ಅವರು ಸ್ಟೇಡಿಯಂನಿಂದ ಹೊರಕ್ಕೆ ಸಿಕ್ಸರ್ ಹೊಡೆದು ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸಿಕ್ಸರ್ನ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನೆಹಾಲ್ ಬ್ಯಾಟಿಂಗ್ ಶೈಲಿಯನ್ನು ಭಾರತ ತಂಡದ ಮಾಜಿ ದಿಗ್ಗಜ ಯುವರಾಜ್ ಸಿಂಗ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಜತೆಗೆ ಈ ಉದಯೋನ್ಮುಖ ಆಟಗಾರನ ಸಾಧನೆಯ ಪಟ್ಟಿಗಳನ್ನು ನೆಟ್ಟಿಗರು ಎಲ್ಲಡೆ ಶೇರ್ ಮಡಲಾರಂಭಿಸಿದ್ದಾರೆ. ಅಂಡರ್-19ನಿಂದಲೂ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ವಧೇರಾ ಮಧ್ಯಮ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ತೋರಿದ್ದಾರೆ.
2018ರಲ್ಲಿ ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರು ಅರ್ಧ ಶತಕಗಳನ್ನು ಬಾರಿಸುವ ಮೂಲಕ ತಮ್ಮ ಸಾಮರ್ತ್ಯವನ್ನು ತೋರಿದ್ದರು. 2022ರ ಪಂಜಾಬ್ ರಾಜ್ಯ ಅಂತರ್ ಜಿಲ್ಲಾ ಪಂದ್ಯಾವಳಿಯಲ್ಲಿ ಅಂಡರ್-23 ವಿರುದ್ಧ 578 ರನ್ಗಳ ಬೃಹತ್ ಮೊತ್ತ ಬಾರಿಸಿ ದಾಖಲೆ ಬರೆದಿದ್ದರು. ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಪಂಜಾಬ್ ತಂಡದ ಪರ ಆಡುತ್ತಿರುವ ವಧೇರಾ ಗುಜರಾತ್ ವಿರುದ್ಧದ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ (123) ಬಾರಿಸಿ ಮಿಂಚಿದ್ದರು. 2022-23ರ ಋತುವಿನಲ್ಲಿ ಮಧ್ಯಪ್ರದೇಶ ವಿರುದ್ಧ ದ್ವಿಶತಕ (214) ಗಳಿಸುವ ಮೂಲಕ ಮಿಂಚಿನ ಪ್ರದರ್ಶನ ಮುಂದುವರೆಸಿದ್ದರು. ಇದೀಗ ಐಪಿಎಲ್ನಲ್ಲಿಯೂ ವಧೇರಾ ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರುಲು ಮುಂದಾಗಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ; ಏನದು?
ಕೊಹ್ಲಿ ಮೆಚ್ಚುಗೆ
22 ವರ್ಷದ ವಧೇರಾ ಅವರ ಬ್ಯಾಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮುಂದಿನ ದಿನಗಳಲ್ಲಿ ವಧೇರಾ ಅವರಿಗೆ ಕ್ರಿಕೆಟ್ನಲ್ಲಿ ಉಜ್ವಲ ಭವಿಷ್ಯವಿದೆ. ಅವರ ಬ್ಯಾಟಿಂಗ್ ನೋಡುವಾಗ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾಕ್ಕೆ ಮತ್ತೊಂದು ಯುವರಾಜ್ ಸಿಂಗ್ ಲಭ್ಯವಾಗುವ ಸಾಧ್ಯತೆ ಇದೆ” ಎಂದು ಕೊಹ್ಲಿ ಹೇಳಿದ್ದಾರೆ. ಆರ್ಸಿಬಿ ವಿರುದ್ಧ ಅವರು 13 ಎಸೆತಗಳಿಂದ 21 ರನ್ ಚಚ್ಚಿದರು. ಇದರಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಒಳಗೊಂಡಿತು.
ಇದನ್ನೂ ಓದಿ IPL 2023: ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದ ಯಜುವೇಂದ್ರ ಚಾಹಲ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ತಿಲಕ್ ವರ್ಮ(ಅಜೇಯ 84) ಅವರ ಏಕಾಂಗಿಯಾಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತು. ದೊಡ್ಡ ಮೊತ್ತವನ್ನು ಲೀಲಾಜಾಲವಾಗಿ ಬೆನ್ನಟ್ಟಿದ ಆರ್ಸಿಬಿ 16.2 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 172 ರನ್ ಬಾರಿಸಿ ಗೆಲುವಿನ ನಗೆ ಬೀರಿತು.