ಮುಂಬಯಿ: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಇದಕ್ಕೂ ಮುನ್ನ ಕಳೆದ 15 ಆವೃತ್ತಿಗಳ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೇಡನ್ ಓವರ್ ಮಾಡಿದ ದಾಖಲೆ ಯಾವ ಆಟಗಾರರ ಹೆಸರಿನಲ್ಲಿದೆ, ಎಷ್ಟು ಮೇಡನ್ ಓವರ್ ಮಾಡಿದ್ದಾರೆ ಎಂಬ ಸಂಪೂರ್ಣ ವಿವರ ಇಂತಿದೆ.
ಪ್ರವೀಣ್ ಕುಮಾರ್
ಭಾರತ ಕ್ರಿಕೆಟ್ ತಂಡ ಮಾಜಿ ಸ್ವಿಂಗ್ ಬೌಲರ್ ಪ್ರವೀಣ್ ಕುಮಾರ್(Praveen Kumar) ಅವರು ಐಪಿಎಲ್ನಲ್ಲಿ ಅತಿ ಹೆಚ್ಚು ಮೇಡನ್ ಓವರ್ ಮಾಡಿದ ದಾಖಲೆ ಹೊಂದಿದ್ದಾರೆ. ವಿಶೇಷವೆಂದರೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ ಪದಾಪರ್ಣ ಪಂದ್ಯದಲ್ಲಿಯೂ ಅವರು ಮೇಡನ್ ಓವರ್ ಎಸೆದಿದ್ದರು. ಅವರು ಐಪಿಎಲ್ನಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಒಟ್ಟು 119 ಪಂದ್ಯಗಳನ್ನು ಆಡಿದ್ದು, 14 ಓವರ್ ಮೇಡನ್ ಎಸೆದಿದ್ದಾರೆ. ಜತೆಗೆ 90 ವಿಕೆಟ್ ಪಡೆದಿದ್ದಾರೆ.
ಇರ್ಫಾನ್ ಪಠಾಣ್
ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರನೆಂದರೆ ಟೀಮ್ ಇಂಡಿಯಾದ ಮಾಜಿ ಎಡಗೈ ವೇಗಿ ಇರ್ಫಾನ್ ಪಠಾಣ್(Irfan Pathan). ಅವರು 103 ಪಂದ್ಯಗಳಲ್ಲಿ 10 ಓವರ್‌ಗಳನ್ನು ಮೇಡನ್ ಮಾಡಿದ್ದಾರೆ. 80 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಅವರು ಈ ಬಾರಿಯ ಐಪಿಎಲ್ನಲ್ಲಿ ಕಾಮೆಂಟ್ರಿ ಪ್ಯಾನಲ್ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಭುವನೇಶ್ವರ್ ಕುಮಾರ್
ಟೀಮ್ ಇಂಡಿಯಾದ ಹಿರಿಯ ವೇಗಿ ಭುವನೇಶ್ವರ್ ಕುಮಾರ್(Bhuvneshwar Kumar) ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಸದ್ಯ ಅವರು ಈವರೆಗೆ 146 ಪಂದ್ಯಗಳಿಂದ ಒಟ್ಟು 9 ಓವರ್ ಮೇಡನ್ ಮಾಡಿದ್ದಾರೆ. 154 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಐಪಿಎಲ್ ಆಡುತ್ತಿರು ಅವರು ಇನ್ನೂ ಹೆಚ್ಚಿನ ಮೇಡನ್ ಓವರ್ ಎಸೆದರೆ ಅಗ್ರ ಸ್ಥಾನಕ್ಕೇರುವ ಅವಕಾಶವಿದೆ. ಏಕೆಂದರೆ ಮೊದಲ ಮತ್ತು ದ್ವಿತೀಯ ಸ್ಥಾನದಲ್ಲಿರುವ ಆಟಗಾರರು ಐಪಿಎಲ್ ನಿವೃತ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ ಆಡಲಿದ್ದಾರಾ ಟೀಮ್ ಇಂಡಿಯಾ ಆಟಗಾರರು? ರೋಹಿತ್ ನೀಡಿದ ಉತ್ತರವೇನು?
ಧವಳ್ ಕುಲಕರ್ಣಿ
ಧವಳ್ ಕುಲಕರ್ಣಿ(Dhawal Kulkarni) ಅವರು ಸಾಧನೆ ಮಾಡಿದ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರು 92 ಪಂದ್ಯಗಳಲ್ಲಿ 8 ಮೇಡನ್ ಓವರ್ ಸಹಿತ 86 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಅವರು ಮುಂಬೈ ಇಂಡಿಯನ್ಸ್ ತಂಡದ ಪರ ಆಡಳಿದ್ದಾರೆ.
ಲಸಿತ ಮಾಲಿಂಗ
ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ(Lasith Malinga) ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 122 ಪಂದ್ಯಗಳಲ್ಲಿ 8 ಮೇಡನ್ ಓವರ್ ಎಸೆದಿದ್ದಾರೆ. ಒಟ್ಟು 170 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಸಂದೀಪ್ ಶರ್ಮಾ ಕೂಡ 8 ಮೇಡನ್ ಓವರ್‌ಗಳನ್ನು ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ 7 ಮೇಡನ್ ಓವರ್‌ಗಳನ್ನು ಎಸೆದಿದ್ದಾರೆ.