ನವದೆಹಲಿ: ಮೊದಲ ಸುತ್ತಿನಲ್ಲಿ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಆರ್ಸಿಬಿ ವಿರುದ್ಧ ದ್ವಿತೀಯ ಪಂದ್ಯವನ್ನು ಆಡಲು ಸಜ್ಜಾಗಿದೆ. ಉಭಯ ತಂಡಗಳ ಈ ಮುಖಾಮುಖಿ ಶನಿವಾರ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತ ಸೋಲಿನಿಂದ ಕಂಗೆಟ್ಟಿದ ಡೆಲ್ಲಿ ಈಗ ಪತ್ರಿ ಪಂದ್ಯವನ್ನು ಗೆಲ್ಲುತ್ತಾ ಬರುತ್ತಿದೆ. ಹೀಗಾಗಿ ಆರ್ಸಿಬಿ ವಿರುದ್ಧವೂ ಗೆಲುವು ಸಾಧಿಸೀತೇ ಎಂದು ಕಾದು ನೋಡಬೇಕಿದೆ. ಈ ಪಂದ್ಯ 16ನೇ ಆವೃತ್ತಿಯ ಐಪಿಎಲ್ನ 50ನೇ ಪಂದ್ಯವಾಗಿದೆ.
ಸದ್ಯ ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ಬಲಿಷ್ಠವಾಗಿದೆ. ಸಣ್ಣ ಮೊತ್ತವನ್ನು ಪೇರಿಸಿದರೂ, ಎದುರಾಳಿ ತಂಡ ಗೆಲುವು ಸಾಧಿಸಲು ಪಂದ್ಯದ ಕೊನೆಯ ಓವರ್ ತನಕ ಹೋರಾಟ ನಡೆಸುತ್ತಿರುವುದು ಇದಕ್ಕೆ ಉತ್ತಮ ಸಾಕ್ಷಿ. ಅನ್ರಿಚ್ ನೋರ್ಜೆ, ಮುಕೇಶ್ ಕುಮಾರ್, ಕುಲ್ದೀಪ್, ಅಕ್ಷರ್ ಪಟೇಲ್ ಮತ್ತು ಇಶಾಂತ್ ಶರ್ಮ ಉತ್ತಮ ಬೌಲಿಂಗ್ ಲಯದಲ್ಲಿದ್ದಾರೆ.
ಆರ್ಸಿಬಿ ಈ ವಿಚಾರದಲ್ಲಿ ತದ್ವಿರುದ್ಧ, ವಿರಾಟ್ ಕೊಹ್ಲಿ, ನಾಯಕ ಫಾಫ್ ಡು ಪ್ಲೆಸಿಸ್, ಮ್ಯಾಕ್ಸ್‌ವೆಲ್ ದೊಡ್ಡ ಮೊತ್ತ ಪೇರಿಸುವಲ್ಲಿ ಸಮರ್ಥರಿದ್ದಾರೆ. ಬೌಲಿಂಗ್ನಲ್ಲಿ ಸಿರಾಜ್ ಹೊರತುಪಡಿಸಿ ಉಳಿದ ಬೌಲರ್ಗಳು ಇದುವರೆಗೂ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿಲ್ಲ. ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಆಗಮಿಸಿದರೂ ಅವರಿಂದ ಇನ್ನೂ ಕೂಡ ಘಾತಕ ಬೌಲಿಂಗ್ ಕಂಡುಬಂದಿಲ್ಲ.
ಇದನ್ನೂ ಓದಿ IPL 2023: ರಶೀದ್ ಖಾನ್ ಸ್ಪಿನ್ ದಾಳಿಗೆ ಪತರುಗುಟ್ಟಿದ ರಾಜಸ್ಥಾನ್ ರಾಯಲ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆ ಐಪಿಎಲ್ನಲ್ಲಿ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ 17 ಪಂದ್ಯಗಳನ್ನು ಗೆದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ಕೊನೆಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಡೆಲ್ಲಿ ವಿರುದ್ಧ ಆರ್ಸಿಬಿ ಆಡಿದ ಒಂದು ಪಂದ್ಯವನ್ನು ಸೋಲು ಕಂಡಿಲ್ಲ. ಹೀಗಾಗಿ ಈ ಪಂದ್ಯದ ಮೇಲು ಆರ್ಸಿಬಿ ಮೇಲೆ ನಿರೀಕ್ಷೆಯೊಂದನ್ನು ಮಾಡಬಹುದು.
ಸಂಭಾವ್ಯ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಾಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ವೈಶಾಖ್ ವಿಜಯ್ ಕುಮಾರ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನೋರ್ಜೆ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್.