ಲಂಡನ್: ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪುರುಷರ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೆ ಪ್ರತಿಷ್ಠಿತ ವಿಸ್ಡನ್ ಪ್ರಶಸ್ತಿ(wisden awards 2023) ಒಲಿದಿದೆ. ಹರ್ಮನ್‌ಪ್ರೀತ್ ಕೌರ್ ಅವರಿಗೆ ವರ್ಷದ ಕ್ರಿಕೆಟ್ ಆಟಗಾರ್ತಿ ಗೌರವ ನೀಡಿದರೆ, ವಿಶ್ವದ ಪ್ರಮುಖ ಟಿ20 ಕ್ರಿಕೆಟಿಗ ಪ್ರಶಸ್ತಿ ಸೂರ್ಯಕುಮಾರ್ ಯಾದವ್ಗೆ ಸಿಕ್ಕಿದೆ. ವರ್ಷದ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಹರ್ಮನ್‌ಪ್ರೀತ್ ಕೌರ್ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಯಶಸ್ವಿ ನಾಯಕಿ ಬೆತ್ ಮೂನಿ ಅವರಿಗೆ ವಿಸ್ಡನ್ ವಿಶ್ವದ ಪ್ರಮುಖ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ. ಬೆನ್ ಸ್ಟೋಕ್ಸ್ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ವಿಸ್ಡನ್‌ನ ವಿಶ್ವದ ಪ್ರಮುಖ ಕ್ರಿಕೆಟಿಗ ಎಂಬ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.
ಬೆತ್ ಮೂನಿ ಸತತ ಐಸಿಸಿ ಟ್ರೋಪಿಗಳನ್ನು ಗೆಲ್ಲುತ್ತಾ ಬಂದ ಸಾಧನೆ ಮಾಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ಸರಣಿಯಲ್ಲಿ ಭಾರತ 3-0 ಅಂತರದಿಂದ ಸರಣಿ ಗೆದ್ದುಕೊಂಡಿತ್ತು. 1999ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪರಿಚಯವಾದ ನಂತರ 2022 ರಲ್ಲಿ ಭಾರತದ ಮಹಿಳಾ ತಂಡ ಕೌರ್ ಅವರ ನಾಯಕತ್ವದಲ್ಲೇ ಬೆಳ್ಳಿ ಪದಕ ಗೆದ್ದುಕೊಂಡಿತ್ತು. 2022ರಲ್ಲಿ ಕೌರ್ ಏಕದಿನದಲ್ಲಿ 754 ರನ್ ಗಳಿಸಿ ಸಾಧನೆ ಜತೆಗೆ ಇಂಗ್ಲೆಂಡ್ ವಿರುದ್ಧ ಅಜೇಯ 143 ರನ್ ಬಾರಿಸಿದ್ದರು. ಟಿ20ಯಲ್ಲಿ ಇವರು 524ರನ್ ಗಳಿಸಿದ ಸಾಧನೆ ಮಾಡಿದ್ದರು.
ಇದನ್ನೂ ಓದಿ IPL 2023: ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಬ್ಯಾಟ್ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳ ಕಳವು; ಚಿಂತೆಯಲ್ಲಿ ಆಟಗಾರರು
ಟಿ20 ಕ್ರಿಕೆಟ್ನಲ್ಲಿ ನಂ.1 ಸ್ಥಾನ ಪಡೆದಿರುವ ಸೂರ್ಯಕುಮಾರ್ ಯಾದವ್ ಕಳೆದ ವರ್ಷ ಟಿ20 ಕ್ರಿಕೆಟ್ನಲ್ಲಿ ಅಮೋಘ ಸಾಧನೆ ಮಾಡಿದ್ದರು. ಕಳೆದ ವರ್ಷ ಭಾರತ ಆಡಿರುವ 40 ಪಂದ್ಯಗಳಲ್ಲಿ 28 ಪಂದ್ಯಗಳ ಗೆಲುವಿಗೆ ಸೂರ್ಯಕುಮಾರ್ ಯಾದವ್ ಕಾರಣರಾಗಿದ್ದರು. 2022ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ 55 ಎಸೆತಗಳಲ್ಲಿ 117 ರನ್ ಗಳಿಸಿ ಚೊಚ್ಚಲ ಟಿ20 ಶತಕ ಬಾರಿಸಿದ್ದರು. ಜತೆಗೆ ಕ್ಯಾಲೆಂಡರ್ ವರ್ಷದಲ್ಲಿ 1503 ರನ್ ಗಳಿಸಿದ ಸಾಧನೆ ಮಾಡಿದ್ದರು.