Site icon Vistara News

IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

IPL 2024

ಚೆನ್ನೈ: ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ(IPL 2024) ಬ್ಲಾಕ್​ ಟಿಕೆಟ್​ ಮಾರಾಟ ಜಾಲವೊಂದನ್ನು ಭೇದಿಸಿರುವ ತಮಿಳುನಾಡು ಪೊಲೀಸರು 12 ಮಂದಿಯನ್ನು ಸೆರೆ ಹಿಡಿದಿದ್ದಾರೆ. ಮಂಗಳವಾರ ನಡೆದ ಚೆನ್ನೈ(Chennai Super Kings) ಮತ್ತು ಲಕ್ನೋ(Lucknow Super Giants) ನಡುವಿನ ಪಂದ್ಯದ ಟಿಕೆಟ್​​ಗಳನ್ನು ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಇವರನ್ನು ಬಂಧಿಸಲಾಗಿದೆ. ಬಂಧಿತರಿಂದ 1,40,396 ರೂಪಾಯಿ ಮೌಲ್ಯದ 56 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ 12 ಮಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ತಂಡ 2 ಪಂದ್ಯಗಳ ಬಳಿಕ ತವರಿನಲ್ಲಿ ಆಡಲಿಳಿದಿತ್ತು. ಹೀಗಾಗಿ ಪಂದ್ಯಕ್ಕೆ ಹೆಚ್ಚುವರಿ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿತ್ತು. ಇದೇ ಕಾರಣದಿಂದ 12 ಮಂದಿ ಕಾಳಸಂತೆಯಲ್ಲಿ ಟಿಕೆಟ್​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿದ್ದರು. ಸೂಕ್ತ ಮಾಹಿತಿಯೊಂದಿಗೆ ಬಲೆ ಬೀಸಿದ ಚೆನ್ನೈ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ ಅವರು ಸಿವಿಲ್​ ಡ್ರೆಸ್​ನಲ್ಲಿ ಮೈದಾನದ ಸುತ್ತಮುತ್ತ ಕಣ್ಗಾವಲು ಮತ್ತು ಮೇಲ್ವಿಚಾರಣೆಯಲ್ಲಿ ತೊಡಗಿದ್ದರು. ಈ ವೇಳೆ ಆಂಧ್ರಪ್ರದೇಶದ ಟಿ.ಏಳುಮಲೈ, ಹಯಾತ್ ಬಾಷಾ ನೂರ್ ಮೊಹಮ್ಮದ್, ಎಸ್ .ಶ್ಯಾಮ್ , ಎಸ್ .ಕಿಶೋರ್ ಸೇರಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಪಂದ್ಯ ಸೋತ ಚೆನ್ನೈ

ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

ಚೇಸಿಂಗ್​ ವೇಳೆ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಮಾರ್ಕಸ್‌ ಸ್ಟಾಯಿನಿಸ್‌ 63 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ಗಳ ಸಮೇತ ಅಜೇಯ 124 ರನ್‌ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಅಂತಿಮ ಓವರ್​ ತನಕ ಪಂದ್ಯ ಚೆನ್ನೈ ತಂಡದ ಕೈಯಲ್ಲಿತ್ತು.

88 ರನ್​ಗೆ 3 ವಿಕೆಟ್​ ಕಳೆದುಕೊಂಡ ಲಕ್ನೊ ತಂಡ ಅಪಾಯಕ್ಕೆ ಸಿಲುಕಿತು. ಆದರೆ ಈ ವೇಳೆ ಆಡಲು ಬಂದ ನಿಕೋಲಸ್ ಪೂರನ್ ಹಾಗೂ ಸ್ಪೊಯ್ನಿಸ್​ 70 ರನ್​ಗಳ ಜತೆಯಾಟ ಆಡಿದರು. ಆದರೆ, 15 ಎಸೆತಕ್ಕೆ 34 ರನ್ ಬಾರಿಸಿದ ಪೂರನ್​ ಔಟಾದ ಬಳಿಕ ಮತ್ತೆ ತೊಂದರೆ ಎದುರಾಯಿತು. ಆದರೆ ಯಾವುದಕ್ಕೂ ಕ್ಯಾರೆ ಎನ್ನದ ಸ್ಟೊಯ್ನಿಸ್​ 56 ಎಸೆತಕ್ಕೆ ಶತಕ ಪೂರೈಸಿದರು. ಕೊನೇ ತನಕ ನಿಂತು ಆಡಿ ಗೆಲ್ಲಿಸಿದರು. ಕೊನೆಯಲ್ಲಿ ದೀಪಕ್ ಹೂಡಾ 6 ಎಸೆತಕ್ಕೆ 17 ರನ್ ಬಾರಿಸಿದರು. ಚೆನ್ನೈ ಪರ ಋತುರಾಜ್‌ 60 ಎಸೆತ ಎದುರಿಸಿ, 12 ಬೌಂಡರಿ , 3 ಸಿಕ್ಸರ್‌ಗಳೊಂದಿಗೆ 108 ರನ್‌ ಚಚ್ಚಿ ಶತಕ ಬಾರಿಸಿದರು. ಆದರೆ ಸೋಲಿನಿಂದ ಅವರ ಶತಕ ವ್ಯರ್ಥಗೊಂಡಿತು.

Exit mobile version