Site icon Vistara News

IPL 2024: ಗೆಳೆಯ ಕೊಹ್ಲಿಗೆ ‘ಬಿಸ್ಕತ್’ ಎಂದು ಶುಭ ಹಾರೈಸಿದ ಎಬಿಡಿ ವಿಲಿಯರ್ಸ್

AB de Villiers

ಚೆನ್ನೈ: ಇಂದು ನಡೆಯುವ 17ನೇ ಆವೃತ್ತಿಯ ಐಪಿಎಲ್​(IPL 2024) ಉದ್ಘಾಟನ ಪಂದ್ಯದಲ್ಲಿ ಆರ್​ಸಿಬಿ(RCB) ಮತ್ತು ಸಿಎಸ್​ಕೆ(CSK) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿ ತಂಡದ ಮಾಜಿ ಆಟಗಾರನಾಗಿರುವ ಎಬಿಡಿ ವಿಲಿಯರ್ಸ್(AB de Villiers) ತಮ್ಮ ನೆಚ್ಚಿನ ಗೆಳೆಯ ವಿರಾಟ್​ ಕೊಹ್ಲಿಗೆ(Virat Kohli) ವಿಶೇಷವಾಗಿ ಶುಭ ಹಾರೈಸಿದ್ದಾರೆ. ಇನ್​ಸ್ಟಾಗ್ರಾಂನಲ್ಲೂ ಕೊಹ್ಲಿ ಜತೆಗಿನ ಫೋಟೋ ಹಂಚಿಕೊಂಡು ‘ಗುಡ್ ಲಕ್ ಮೈ ಬಿಸ್ಕತ್’ ಎಂದು ಶುಭಕೋರಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್​ ಕುಚಿಕು ಗೆಳೆಯರು. ಕೊಹ್ಲಿಯ ಯಾವುದೇ ಸಾಧನೆ ಇರಲಿ ಮೊದಲು ಹಾರೈಸುವುದು ವಿಲಿಯರ್ಸ್​. ಕೊಹ್ಲಿ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಾಗ ಅವರ ಬಗೆಗಿನ ಟೀಕೆಯನ್ನು ಎಬಿಡಿ ಖಂಡಿಸುವ ಮೂಲಕ ಕೊಹ್ಲಿಗೆ ಬೆಂಬಲ ಸೂಚಿಸುತ್ತಿದ್ದರು.

“ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಆತ ಕೊಂಚ ಕೋಪಿಷ್ಟ ಹಾಗೂ ಅಹಂಕಾರಿ ಎಂದುಕೊಂಡಿದ್ದೆ. ಏಕೆಂದರೆ ಅವರು ಆಡುವ ಬೇಳೆ ಹಲವು ಬಾರಿ ಇತರ ತಂಡದ ಆಟಗಾರರೊಂದಿಗೆ ಕಿರಿಕ್​ ಮಾಡಿದ್ದರು. ಆದರೆ ದಿನಕಳೆದಂತೆ ಕೊಹ್ಲಿ ಜತೆ ಬೆರೆಯುತ್ತಿದ್ದಂತೆಯೇ, ಅವರ ಕುರಿತಾದ ತಮ್ಮ ನಿಲುವು ಬದಲಾಯಿತು. ಅವರ ಮೇಲೆ ನನಗೆ ಸಾಕಷ್ಟು ಗೌರವ ಮೂಡಿತು. ಅವರೊಬ್ಬ ಅದ್ಭುತ ವ್ಯಕ್ತಿ ಜತೆಗೆ ಉತ್ತಮ ಕ್ರಿಕೆಟಿಗ” ಎಂದು ಎಬಿಡಿ ಹಿಂದೊಮ್ಮೆ ಅನ್​ಬಾಕ್ಸ್​ ಆರ್​ಸಿಬಿ ಕಾರ್ಯಕ್ರಮದಲ್ಲಿ ಹೇಳಿದ್ದರು.

ಇದನ್ನೂ ಓದಿ IPL 2024: 10 ವರ್ಷದ ಐಪಿಎಲ್​ ಜರ್ನಿಯ ಭಾವನಾತ್ಮಕ ವಿಡಿಯೊ ಹಂಚಿಕೊಂಡ ಹಾರ್ದಿಕ್​ ಪಾಂಡ್ಯ

ಆರ್​ಸಿಬಿ ಈ ಬಾರಿ ಕಪ್​ ಗೆಲ್ಲಲಿದೆ!


ಆರ್​ಸಿಬಿ ತಂಡ ಈ ಬಾರಿ ಕಪ್​ ಬರ ನೀಗಿಸಲಿದೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ. ನ್ಯೂಸ್​ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಎಬಿಡಿ, ಯಾವುದೇ ಅನುಮಾನ ಬೇಡ ಈ ಸಲ ಕಪ್ ನಮ್ದೇ… ಈ ಬಾರಿ ಆರ್​ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸ್ಮೃತಿ ಮಂಧಾನಾ ನೇತೃತ್ವದ ಮಹಿಳಾ ಆರ್​ಸಿಬಿ ಚೊಚ್ಚಲ ಪ್ರಶಸ್ತಿ ಗೆದ್ದಿದೆ. ಇದೇ ಹುರುಪಿನಲ್ಲಿರುವ ಪುರುಷರ ತಂಡವೂ ಕೂಡ ಕಪ್​ ಗೆಲ್ಲಲೇ ಬೇಕೆನ್ನುವ ಹಠಕ್ಕೆ ಬಿದ್ದಿದೆ ಎಂದರು.

ಎಬಿಡಿ ವಿಲಿಯರ್ಸ್ ಭವಿಷ್ಯ ಕೇಳಿ ಆರ್​ಸಿಬಿ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. ಏಕೆಂದರೆ ಎಬಿಡಿ ಈ ಹಿಂದೆ ಹೇಳಿದ ಹಲವು ಭವಿಷ್ಯಗಳು ನಿಜವಾಗಿದೆ. 2022ರಲ್ಲಿ ಹಾರ್ದಿಕ್​ ಪಾಂಡ್ಯ ಸಾರಥ್ಯದ ಗುಜರಾತ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ ಎಂದು ಎಬಿಡಿ ಹೇಳಿದ್ದರು. ಅದರಂತೆ ಪಾಂಡ್ಯ ಕಪ್​ ಗೆದ್ದಿದ್ದರು. ಕಳೆದ ವರ್ಷ ಕೂಡ ಗುಜರಾತ್ ಫೈನಲ್​ ತಲುಪಲಿದೆ ಎಂದು ಹೇಳಿದ್ದರು. ಇದು ಕೂಡ ನಿಜವಾಗಿತ್ತು. ಈ ಬಾರಿ ಆರ್​ಸಿಬಿ ಕಪ್​ ಗೆಲ್ಲಲಿದೆ ಎಂದಿದ್ದಾರೆ. ಅವರ ಭವಿಷ್ಯ ನಿಜವಾಗಲಿದೆಯಾ? ಎಂದು ಕಾದು ನೋಡಬೇಕಿದೆ.

Exit mobile version