Site icon Vistara News

IPL 2024: 41ನೇ ವಯಸ್ಸಿನಲ್ಲೂ ದಾಖಲೆ ಬರೆದ ಅಮಿತ್ ಮಿಶ್ರಾ

IPL 2024

ಲಕ್ನೋ: ಶನಿವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ತಂಡದ ಹಿರಿಯ ಸ್ಪಿನ್ನರ್​ ಅಮಿತ್ ಮಿಶ್ರಾ(Amit Mishra) ಅವರು ಐಪಿಎಲ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ರಾಜಸ್ಥಾನ್​ ರಾಯಲ್ಸ್​(Rajasthan Royals) ವಿರುದ್ಧ 1 ವಿಕೆಟ್​ ಕೀಳುವ ಮೂಲಕ ಐಪಿಎಲ್​ನಲ್ಲಿ ವಿಕೆಟ್​ ಕಿತ್ತ ಅತಿ ಹಿರಿಯ ಆಟಗಾರ ಎನಿಸಿಕೊಂಡರು. 41ನೇ ವಯಸ್ಸಿನಲ್ಲಿ ಅಮಿತ್​ ಮಿಶ್ರಾ ಈ ಸಾಧನೆ ಮಾಡಿದ್ದಾರೆ.

2 ಓವರ್​ ಬೌಲಿಂಗ್​ ನಡೆಸಿದ ವಿಶ್ರಾ, 20 ರನ್​ ನೀಡಿ 1 ವಿಕೆಟ್​ ಕೀತ್ತು ಮಿಂಚಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಕೆಟ್ ಪಡೆದ ಅತ್ಯಂತ ಹಿರಿಯ ಬೌಲರ್ ಮತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಲಸಿತ್ ಮಾಲಿಂಗ (173) ಅವರನ್ನು ಹಿಂದಿಕ್ಕಿದ್ದಾರೆ. ಇದುವರೆಗೆ ಐಪಿಎಲ್​ನಲ್ಲಿ 162 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಮಿತ್ ಮಿಶ್ರಾ 174 ವಿಕೆಟ್ ಕಬಳಿಸಿದ್ದಾರೆ. ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆಯೂ ಮಾಡಿದ್ದಾರೆ. ಯಜುವೇಂದ್ರ ಚಹಲ್​ 200 ವಿಕೆಟ್​ ಕಿತ್ತು ಅಗ್ರಸ್ಥಾನದಲ್ಲಿದ್ದಾರೆ.

ಪಂದ್ಯ ಸೋತ ಲಕ್ನೋ

ಇಲ್ಲಿನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​​ ನಡೆಸಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್​ 24 ರನ್ ಬಾರಿಸಿದರೆ ಜೋಸ್​ ಬಟ್ಲರ್​​ 34 ರನ್​ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್​ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್​ 14 ರನ್​ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್​ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್​ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.

ರಾಹುಲ್​ 31 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಈ ವೇಳೆ ಅವರು ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಐದನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯನ್ನು ಸಾಧಿಸಲು ಅವರು 94 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡರು. ಶಿಖರ್ ಧವನ್ (6362), ಡೇವಿಡ್ ವಾರ್ನರ್ (5909), ಕ್ರಿಸ್ ಗೇಲ್ (4480) ಮತ್ತು ವಿರಾಟ್ ಕೊಹ್ಲಿ (4041) ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version