Site icon Vistara News

IPL 2024: ಸಚಿನ್ ಐಪಿಎಲ್​​ ದಾಖಲೆ ಮುರಿದ ಆ್ಯಂಡ್ರೆ ರೆಸೆಲ್

IPL 2024

ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧ ಕೇವಲ 19 ಎಸೆತಗಳಿಂದ 41 ರನ್​ ಚಚ್ಚಿದ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡದ ಸ್ಟಾರ್​ ಆಲ್​ರೌಂಡರ್​ ಆ್ಯಂಡ್ರೆ ರೆಸೆಲ್(Andre Russell)​ ಅವರು ಈ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ ಮೂಲಕ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಐಪಿಎಲ್​(IPL 2024) ದಾಖಲೆಯೊಂದನ್ನು ಮುರಿದಿದ್ದಾರೆ.

ಸದ್ಯ ಐಪಿಎಲ್ 115 ಪಂದ್ಯಗಳನ್ನು ಆಡಿರುವ ರಸೆಲ್ 2,367 ರನ್ ಗಳಿಸುವ ಮೂಲಕ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. 2008 ರಿಂದ 2013 ರವರೆಗೆ ಮುಂಬೈ ಇಂಡಿಯನ್ಸ್‌ ಪರ ಆಡಿದ್ದ ಸಚಿನ್​ ಅವರು 78 ಐಪಿಎಲ್​ ಪಂದ್ಯಗಳಿಂದ 2,334 ರನ್ ಗಳಿಸಿದ್ದರು. ಇದೀಗ ಅವರ ಈ ದಾಖಲೆಯನ್ನು ರಸೆಲ್​ ಮುರಿದಿದ್ದಾರೆ.

ತೆಂಡೂಲ್ಕರ್ ಅವರು ಐಪಿಎಲ್​ನಲ್ಲಿ ಒಂದು ಶತಕ ಮತ್ತು 13 ಅರ್ಧಶತಕಗಳನ್ನು ಬಾರಿಸಿದ ಹೆಗ್ಗಳಿಕೆಯನ್ನು ಕೂಡ ಹೊಂದಿದ್ದಾರೆ. 2010 ರ ಆವೃತ್ತಿಯಲ್ಲಿ 15 ಪಂದ್ಯ ಆಡಿ 618 ರನ್​ ಬಾರಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಅವರ ಈ ಸಾಧನೆಗೆ ಆರೆಂಜ್ ಕ್ಯಾಪ್ ಸಿಕ್ಕಿತ್ತು. ಪ್ರಸ್ತುತ ಮುಂಬೈ ಇಂಡಿಯನ್ಸ್​ ತಂಡದ ಸಲಹೆಗಾರನಾಗಿ ಸಚಿನ್​ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಚಿನ್​ ಅವರು 24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ IPL 2024: ನಿಷೇಧ ಭೀತಿಯಲ್ಲಿ ರಿಷಭ್​ ಪಂತ್​; ನಿಧಾನಗತಿ ಬೌಲಿಂಗ್​ಗೆ 24 ಲಕ್ಷ ರೂ. ದಂಡ

ಇಶಾಂತ್​ ಡೆಡ್ಲಿ ಯಾರ್ಕರ್​ಗೆ ರಸೆಲ್ ಕ್ಲೀನ್​ ಬೌಲ್ಡ್


ರಸೆಲ್​(Andre Russell) ಅವರನ್ನು ಡೆಲ್ಲಿ ತಂಡದ ವೇಗಿ ಇಶಾಂತ್​ ಶರ್ಮ(Ishant Sharma) ಡೆಡ್ಲಿ ಯಾರ್ಕರ್​ ಮೂಲಕ ಕ್ಲೀನ್​ ಬೌಲ್ಡ್​ ಮಾಡಿದ ವಿಡಿಯೊ ವೈರಲ್​(viral video) ಆಗಿದೆ. ಈ ಯಾರ್ಕರ್​ ಕಂಡು ರಸೆಲ್​ ಔಟಾದರೂ ಕೂಡ ಬ್ಯಾಟ್​ ಮೇಲೆತ್ತಿ ಚಪ್ಪಾಳೆ ತಟ್ಟುತ್ತಾ ಇಶಾಂತ್​ಗೆ ಮೆಚ್ಚುಗೆ ಸೂಚಿಸಿದರು. ಇಶಾಂತ್​ ಅವರ ಈ ಘಾತಕ ಯಾರ್ಕರ್​ ವಿಡಿಯೊವನ್ನು ಐಪಿಎಲ್​ ಕೂಡ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ನಲ್ಲಿ ಹಂಚಿಕೊಂಡು ‘ಯಾರ್ಕ್ಡ್’ ಎಂದು ಬರೆದುಕೊಂಡಿದೆ.

Exit mobile version