Site icon Vistara News

IPL 2024: ಮುಂದಿನ ವರ್ಷ ಭಾರತದಲ್ಲಿ ಐಪಿಎಲ್ ಇಲ್ಲ; ಸುಳಿವು ನೀಡಿದ ಆಟಗಾರರ ಹರಾಜು ಪ್ರಕ್ರಿಯೆ

IPL 2024 auction

ಮುಂಬಯಿ: ಮುಂದಿನ ವರ್ಷದ ಐಪಿಎಲ್‌(IPL 2024) ಯಾವಾಗ ನಡೆಯುತ್ತದೆ ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ಬಿಸಿಸಿಐ ಸಂಕಟಕ್ಕೆ ಸಿಲುಕಿದೆ. ಇದಕ್ಕೆ ಕಾರಣ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ. ಈ ಮಹಾ ಚುನಾವಣೆ ಎಪ್ರೀಲ್​ನಲ್ಲಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಐಪಿಎಲ್ ಟೂರ್ನಿಯನ್ನು ಈ ಮೊದಲೇ ಭಾರತದಲ್ಲಿ ನಡೆಸುವುದೋ, ಅಥವಾ ವಿದೇಶಕ್ಕೆ ವರ್ಗಾಯಿಸುವುದೋ ಎಂಬ ವಿಚಾರದಲ್ಲಿ ಬಿಸಿಸಿಐ ಇಕ್ಕಟ್ಟಿಗೆ ಸಿಲುಕಿದೆ. ಸದ್ಯದ ಮಾಹಿತಿ ಪ್ರಕಾರ ದುಬೈನಲ್ಲಿ ಟೂರ್ನಿ ನಡೆಯಲಿದೆ ಎಂದು ತಿಳಿದುಬಂದಿದೆ.

ದುಬೈನಲ್ಲಿ ಆಟಗಾರರ ಹರಾಜು!

ಕಳೆದ ವರ್ಷದ ಐಪಿಎಲ್ ಹರಾಜು ಕೊಚ್ಚಿಯಲ್ಲಿ ನಡೆದಿತ್ತು. ಆದರೆ ಈ ಬಾರಿಯ ಹರಾಜು(ipl 2024 auction) ಕಾರ್ಯಕ್ರಮ ದೇಶದ ಹೊರಗೆ ನಡೆಸಲು ಬಿಸಿಸಿಐ ಯೋಚಿಸುತ್ತಿದೆ. ಈ ಬಾರಿ ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಲಿದೆ. ಡಿಸೆಂಬರ್ 15ರಿಂದ 19ರೊಳಗೆ ಹರಾಜು ನಡೆಯಬಹುದು ಎಂದು ಕ್ರಿಕ್ ಬಜ್ ವರದಿ ಮಾಡಿದೆ. ಟೂರ್ನಿಯೂ ಇಲ್ಲೇ ನಡೆಯುವ ಸುಳಿವೊಂದು ಲಭಿಸಿದೆ.

ಇದನ್ನೂ ಓದಿ IPL 2024 : ಲೈಂಗಿಕ ಕಿರುಕುಳ ಹಗರಣದಲ್ಲಿ ಸಿಕ್ಕಿಬಿದ್ದವರಿಗೆ ಐಪಿಎಲ್​ ಆಡಳಿತ ಮಂಡಳಿಯಲ್ಲಿ ಸ್ಥಾನ?

ಈ ಹಿಂದೆಯೂ ವಿದೇಶದಲ್ಲಿ ನಡೆದಿತ್ತು ಟೂರ್ನಿ

2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಆದರೆ ಈ ಬಾರಿ ಬಿಸಿಸಿಐ ಸಂಪೂರ್ಣವಾಗಿ ಟೂರ್ನಿಯನ್ನು ವಿದೇಶದಲ್ಲಿ ನಡೆಸುವುದು ಕಷ್ಟ ಸಾಧ್ಯ. ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಒಂದು ಹಂತದ ಪಂದ್ಯಗಳನ್ನು ವಿದೇಶದಲ್ಲಿ ನಡೆಸುವ ಸಾಧ್ಯತೆ ಇದೆ. ಆದರೆ ಈ ತಾಣ ಯಾವುದೆಂಬುದು ಕುತೂಹಲ.

ಸದ್ಯದ ಪ್ರಕಾರ ಬಿಸಿಸಿಐ ಯುಎಇಯಲ್ಲಿ ನಡೆಸುವ ಸಾಧ್ಯತೆ ಅಧಿಕ. ಏಕೆಂದರೆ ಪ್ರಯಾಣದ ದೃಷ್ಟಿಯಲ್ಲಿ ಹತ್ತಿರವಿರುವುದರಿಂದ ಯುಎಇಯನ್ನು ಮೊದಲ ಆಧ್ಯತೆಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ಕೊರೊನಾ ಸಂಕಷ್ಟದಲ್ಲಿ ಬಿಸಿಸಿಐ ಇಲ್ಲೇ ಐಪಿಎಲ್​ ಮತ್ತು ಟಿ20 ವಿಶ್ವಕಪ್​ ಪಂದ್ಯಗಳನ್ನು ನಡೆಸಿತ್ತು. ಹೀಗಾಗಿ 17ನೇ ಆವೃತ್ತಿ ಕೂಡ ದುಬೈನಲ್ಲಿ ನಡೆದರೆ ಅಚ್ಚರಿಯಿಲ್ಲ. ಜತೆಗೆ ಇಲ್ಲಿ ಪಂದ್ಯಗಳಿಗೆ ಯಾವುದೇ ಮಳೆಯ ಭೀತಿ ಕೂಡ ಇಲ್ಲ. ಇಲ್ಲಿನ ಸರ್ಕಾರ ಕೂಡ ಉತ್ತಮ ಬೆಂಬಲ ನೀಡುತ್ತಿದೆ.

ಅಧಿಕೃತ ಮಾಹಿತಿ ಬಂದಿಲ್ಲ

ದುಬೈನಲ್ಲಿ ಐಪಿಎಲ್ ಹರಾಜಿನ ಕುರಿತು ಯಾವುದೇ ಫ್ರಾಂಚೈಸಿಗಳಿಗೆ ಅಧಿಕೃತ ಅಧಿಸೂಚನೆಯನ್ನು ಕಳುಹಿಸಲಾಗಿಲ್ಲ. ಈ ಬಗ್ಗೆ ಚರ್ಚೆಗಳು ಮಾತ್ರ ನಡೆತ್ತಿವೆ. ಡಿಸೆಂಬರ್ 18 ಅಥವಾ 19 ರಂದು ಹರಾಜು ನಡೆಯಬಹುದು ಎನ್ನಲಾಗಿದೆ. ವಿಶ್ವಕಪ್​ನಲ್ಲಿ ನಿರತವಾಗಿರುವ ಬಿಸಿಸಿಐ ಈ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.

ಕಳೆದ ವರ್ಷದ ಆಟಗಾರರ ಹರಾಜನ್ನು ಬಿಸಿಸಿಐ ಇಸ್ತಾಂಬುಲ್‌ನಲ್ಲಿ ನಡೆಸಲು ಯೋಜನೆ ಹಾಕಿತ್ತು. ಇದು ಬಾರಿ ಚರ್ಚೆಗೂ ಗ್ರಾಸವಾಗಿತ್ತು. ಭಾರತದ ವಿರೋಧಿ ದೇಶದಲ್ಲಿ ಬಿಸಿಸಿಐ ಆಟಗಾರರ ಹರಾಜು ನಡೆಸುವ ಮೂಲಕ ವೈರಿ ದೇಶಕ್ಕೆ ಬೆಂಬಲ ಸೂಚಿಸುತ್ತಿದೆ ಎನ್ನುವ ಟೀಕೆಗಳು ಕೇಳಿ ಬಂದಿತ್ತು. ಬಳಿಕ ಕೊಚ್ಚಿಯಲ್ಲಿ ಹರಾಜು ನಡೆಸಲಾಗಿತ್ತು. ಸದ್ಯ ಎಲ್ಲ ಐಪಿಎಲ್ ಫ್ರಾಂಚೈಸಿಗಳಿಗೆ ಗಲ್ಫ್ ನಗರವನ್ನು ಹರಾಜು ಸ್ಥಳವಾಗಿ ಪರಿಗಣಿಸುವ ಬಗ್ಗೆ ತಿಳಿಸಲಾಗಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.

Exit mobile version