Site icon Vistara News

IPL 2024: ಐಪಿಎಲ್​ನಲ್ಲಿ ಮತ್ತೊಂದು ಹೊಸ ಪ್ರಯೋಗ ನಡೆಸಲು ಮುಂದಾದ ಬಿಸಿಸಿಐ

Height-Related No-Ball

ಬೆಂಗಳೂರು: ಈಗಾಗಲೇ ಐಪಿಎಲ್(IPL 2024)ನಲ್ಲಿ​ ಹಲವು ಪ್ರಯೋಗದ ಮೂಲಕ ಹೊಸ ನಿಯಮಗಳನ್ನು ಜಾರಿಗೆ ತಂದಿರುವ ಬಿಸಿಸಿಐ(BCCI) ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಹಲವು ಪಂದ್ಯಗಳಲ್ಲಿ ವಿವಾದಕ್ಕೆ ಕಾರಣವಾಗುವ ಫುಲ್‌ಟಾಸ್‌ ನೋಬಾಲ್‌(Height-Related No-Ball) ನಿರ್ಧಾರದ ಗೊಂದಲವನ್ನು ಪರಿಹರಿಸಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಎಲ್ಲ ಆಟಗಾರರ ಸೊಂಟದವರೆಗಿನ ಎತ್ತರದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ವರದಿಯಾಗಿದೆ.

ಫುಲ್‌ಟಾಸ್‌ ನೋಬಾಲ್‌ ನಿರ್ಧಾರದಿಂದ ಅದೆಷ್ಟೋ ಪಂದ್ಯಗಳು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಕೆಲವು ತಂಡಗಳು ಈ ನೋಬಾಲ್‌ ತೀರ್ಪಿನಿಂದ ಪಂದ್ಯಗಳು ಸೋತ ಹಲವಾರು ನಿದರ್ಶನವೂ ಕೂಡ ಇದೆ. ಆಟಗಾರರು, ಕ್ರಿಕೆಟ್​ ಪಂಡಿತರು ಈ ನಿಯಮದ ಬಗ್ಗೆ ಹಲವು ಬಾರಿ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಮುಂದೆ ಇಂತಹ ತಪ್ಪುಗಳಾಗಬಾರದು ಎನ್ನುವ ನಿಟ್ಟಿನಲ್ಲಿ ಬಿಸಿಸಿಐಯ ತಂಡವೊಂದು ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದು, ಈ ಮಾಹಿತಿಯನ್ನು 3ನೇ ಅಂಪೈರ್​ ಬಳಿ ಇರುವ ಹಾಕ್‌-ಐ ತಂತ್ರಜ್ಞರಿಗೆ ನೀಡಲಾಗುತ್ತದೆ.

ಇದನ್ನೂ ಓದಿ IPL 2024: ಸೋಲಿನ ಬೆನ್ನಲ್ಲೇ ಗುಜರಾತ್ ತಂಡದ ನಾಯಕನಿಗೆ ಬಿತ್ತು 12 ಲಕ್ಷ ರೂ. ದಂಡ

ಚೆಂಡು ನೆಲದಿಂದ ಇರುವ ಎತ್ತರ ಹಾಗೂ ಬ್ಯಾಟಿಂಗ್​ ನಡೆಸುವ ಆಟಗಾರನ ಸೊಂಟದವರೆಗಿನ ಎತ್ತರವನ್ನು ಲೆಕ್ಕ ಹಾಕಿ, ಚೆಂಡು ಸೊಂಟಕ್ಕಿಂತ ಮೇಲಿದೆಯೋ ಇಲ್ಲವೋ ಎಂಬುದನ್ನು ತಕ್ಷಣ ನಿರ್ಧರಿಸಿ ಮೂರನೇ ಅಂಪೈರ್​ಗೆ ತಿಳಿಸಲಾಗುತ್ತದೆ. ಇದರಿಂದಾಗಿ ಫುಲ್‌ಟಾಸ್‌ ನೋಬಾಲ್​ಗೆ ಸಂಬಂಧಿಸಿದ ಎಲ್ಲ ಗೊಂದಲಗಳು ಪರಿಹಾರವಾಗಲಿದೆ ಎನ್ನುವುದು ಬಿಸಿಸಿಐ ಲೆಕ್ಕಾಚಾರ. ಆದರೆ ಇದು ಯಾವಾಗ ಜಾರಿಗೆ ಬರುತ್ತದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಈ ಬಾರಿಯ ಟೂರ್ನಿಯಲ್ಲಿIPL 2024) ಜಾರಿಯಾಗಿರುವ ಪ್ರಮುಖ ನಿಯಮವೆಂದರೆ ಅದು ವೇಗದ ಬೌಲರ್‌ಗೆ ಒಂದೇ ಒವರ್‌ನಲ್ಲಿ 2 ಬೌನ್ಸರ್‌ ಎಸೆಯಲು ನೀಡಿದ ಅವಕಾಶ. ಬೌನ್ಸರ್‌ ಎಸೆತ ಬ್ಯಾಟರ್‌ನ ತಲೆ ಮೇಲಿನಿಂದ ಹೋದರೆ ವೈಡ್‌ ಎಂದು ನಿರ್ಧಾರಿಸಲಾಗುತ್ತದೆ. 3ನೇ ಬೌನ್ಸರ್‌ ಎಸೆದರೆ ನೋ ಬಾಲ್‌ ಆಗುತ್ತದೆ. ಒಂದೇ ಪಂದ್ಯದಲ್ಲಿ ಬೌಲರ್‌ ಒಬ್ಬ 2ನೇ ಬಾರಿ, 3 ಬೌನ್ಸರ್‌ ಎಸೆದರೆ ಬೌಲರನ್ನು ಪಂದ್ಯದಿಂದ ಅನರ್ಹಗೊಳಿಸಬಹುದಾಗಿದೆ.

ಈ ಬಾರಿಯ ಐಪಿಎಲ್​ ಟೂರ್ನಿಯ ಮಾದರಿ


ಕಳೆದ ಬಾರಿಯಂತೆ ಈ ಬಾರಿಯೂ ಕೂಟದಲ್ಲಿ ಭಾಗವಹಿಸುವ ಒಟ್ಟು 10 ತಂಡಗಳನ್ನು ತಲಾ 5 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿರುವ ಪ್ರತಿ ತಂಡವೂ, ಮತ್ತೂಂದು ಗುಂಪಿನಲ್ಲಿರುವ ತಂಡಗಳ ಜತೆ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಈ ಪೈಕಿ ಒಂದು ಪಂದ್ಯವನ್ನು ತವರಿನಲ್ಲಿ , ಮತ್ತೂಂದು ಪಂದ್ಯವನ್ನು ಎದುರಾಳಿ ತಂಡದ ತವರಿನಲ್ಲಿ ಆಡಲಿದೆ. ಇದು ಮಾತ್ರವಲ್ಲಿದೆ ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ಇತರ 4 ತಂಡಗಳ ಜತೆ ತಲಾ 1 ಪಂದ್ಯ ಆಡಲಿದೆ.

ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ ಆಫ್​ ಟಿಕೆಟ್​ ಪಡೆಯಲಿದೆ. ಮೊದಲ 2 ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್‌ ಆಡಿ ಇಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. 3 ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿದೆ. ಇಲ್ಲಿ ಗೆದ್ದ ತಂಡ, ಮೊದಲ ಪ್ಲೇ ಆಫ್​ನಲ್ಲಿ ಸೋತ ತಂಡದೊಂದಿಗೆ 2ನೇ ಕ್ವಾಲಿಫೈಯರ್‌ ಪಂದ್ಯ ಆಡಲಿದೆ. 2ನೇ ಪ್ಲೇ ಆಫ್​ನಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಲೀಗ್​ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ.

Exit mobile version