Site icon Vistara News

IPL 2024: ಶೀಘ್ರದಲ್ಲೇ ಐಪಿಎಲ್​ ದ್ವಿತೀಯಾರ್ಧದ ಪಂದ್ಯದ ವೇಳಾಪಟ್ಟಿ ಪ್ರಕಟ; ಎಲ್ಲಿ ನಡೆಯಲಿದೆ ಟೂರ್ನಿ?

BCCI Reworking IPL 2024 Schedule

ನವದೆಹಲಿ: 2024 ರ ಐಪಿಎಲ್‌(IPL 2024) ಟೂರ್ನಿ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಮಾರ್ಚ್ 22 ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್​ಸಿಬಿ ಮತ್ತು ಚೆನ್ನೈ ತಂಡಗಳು ಸೆಣಸಾಡುವ ಮೂಲಕ ಕೂಟಕ್ಕೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯ(2024 General Elections) ಕಾರಣದಿಂದ ಬಿಸಿಸಿಐ(BCCI ) ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಘೋಷಿಸಿತ್ತು. ಇದೀಗ ದ್ವಿತೀಯಾರ್ಧದ(BCCI Reworking IPL 2024 Schedule) ಪಂದ್ಯದ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ.

ಬಿಸಿಸಿಐ ದ್ವಿತೀಯಾರ್ಧದ ಪಂದ್ಯದಗಳ ವೇಳಾಪಟ್ಟಿಯನ್ನು ರಚಿಸುತ್ತಿದ್ದು ಅಂತಿಮ ಹಂತದಲ್ಲಿದೆ ಎಂದು ಕ್ರಿಕೆಟ್ ನೆಕ್ಟ್ಸ್​ ತನ್ನ ವರದಿಯಲ್ಲಿ ತಿಳಿಸಿದೆ. ಕಳೆದ ತಿಂಗಳು ಬಿಸಿಸಿಐ ಐಪಿಎಲ್‌ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಅನೌನ್ಸ್‌ ಮಾಡಿತ್ತು. ಉಳಿದ ಪಂದ್ಯಗಳು ಯಾವಾಗಿನಿಂದ ಹಾಗೂ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇದುವರೆಗೆ ರಿವೀಲ್‌ ಆಗಿರಲಿಲ್ಲ. ಇದೀಗ ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಏ. 7 ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಮೊದಲಾರ್ಧದ ಕೊನೆಯ ಪಂದ್ಯ ನಡೆಯಲಿದೆ.

“ಲೋಕಸಭಾ ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ನಡೆಯಲಿದೆ. ನಿಖರವಾದ ದಿನಾಂಕಗಳನ್ನು ತಿಳಿದ ಕಾರಣದಿಂದ ಉಳಿದ ಪಂದ್ಯಗಳ ವೇಳಾಪಟ್ಟಿ ಕುರಿತು ಕೆಲಸ ನಡೆಯುತ್ತಿದೆ. ಮತದಾನದ ದಿನಾಂಕದ ಘರ್ಷಣೆಯನ್ನು ತಪ್ಪಿಸಲು ನಾವು ಮೊದಲ ಡ್ರಾಫ್ಟ್‌ನಿಂದ ಕೆಲವು ಫಿಕ್ಚರ್‌ಗಳನ್ನು ಮರುಸೃಷ್ಟಿಸುತ್ತಿದ್ದೇವೆ” ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್(Arun Dhumal) ಕ್ರಿಕೆಟ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ IPL 2024: ಸಂಜು ಕೆಣಕಿದ ಪಾಂಡ್ಯ; ಹ್ಯಾಟ್ರಿಕ್​​ ಸಿಕ್ಸರ್​ ಹೊಡೆಸಿಕೊಂಡ ರಶೀದ್​ ಖಾನ್​

ಭಾರತದಲ್ಲೇ ಪಂದ್ಯಾವಳಿ


ಚುನಾವಣ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪಂದ್ಯಾವಳಿ ನಡೆಸುವು ಮತ್ತು ಭದ್ರತೆ ನೀಡುವುದು ಕಷ್ಟವಾಗಬಹುದು ಎಂಬ ಕಾರಣದಿಂದ, ದ್ವಿತೀಯಾರ್ಧದ ಪಂದ್ಯಗಳನ್ನು ಬಿಸಿಸಿಐ ದುಬೈಗೆ ಸ್ಥಳಾಂತರಿಸಲು ಮುಂದಾಗಿದೆ ಎಂದು ಕಳೆದ ವಾರ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ʼಟೈಮ್ಸ್‌ ಆಫ್‌ ಇಂಡಿಯಾʼ ವರದಿ ಮಾಡಿತ್ತು. ಇದೀಗ ಅರುಣ್​ ಧುಮಾಲ್ ಪಂದ್ಯ ವಿದೇಶದಲ್ಲಿ ನಡೆಸುವ ಮಾತೇ ಇಲ್ಲ ಎಂದು ಬಲವಾದ ಹೇಳಿಕೆ ನೀಡಿದ್ದಾರೆ.

“ಲೀಗ್ ಅನ್ನು ದೇಶದಿಂದ ಸ್ಥಳಾಂತರಿಸುವ ಯಾವುದೇ ಆಲೋಚನೆ ಇಲ್ಲ, ಮತ್ತು ಇಡೀ ಲೀಗ್ ಅನ್ನು ಭಾರತದಲ್ಲಿ ಮಾತ್ರ ಆಡಲಾಗುವುದು. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಪ್ರೋಟೋಕಾಲ್‌ಗಳು ಮತ್ತು ಸಲಹೆಗಳನ್ನು ಅನುಸರಿಸಿ ಬಿಸಿಸಿಐ ಭದ್ರತಾ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಉಳಿದ ಪಂದ್ಯಾವಳಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ”ಎಂದು ಧುಮಾಲ್ ಹೇಳಿದ್ದಾರೆ. ಧುಮಾಲ್​ ಹೇಳಿಕೆ ನೋಡುವಾಗ ಚುನಾವಣೆ ನಡೆಯುವ ದಿನ ಪಂದ್ಯವನ್ನು ನಡೆಸದೆ ಉಳಿದ ದಿನಗಳಲ್ಲಿ ಪಂದ್ಯವನ್ನು ನಡೆಯುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಂತೆ ಕಾಣುತ್ತಿದೆ. ಆದರೆ ಚುನಾವಣ ಸಮಿತಿಯಿಂದ ಅನುಮತಿ ಕಡ್ಡಾಯ. ಒಂದೊಮ್ಮೆ ಚುನಾವಣ ಆಯೋಗ ನೋ ಎಂದರೆ ಆಗ ಬೇರೆ ಮಾರ್ಗವಿಲ್ಲದೆ ಪಂದ್ಯಾವಳಿ ವಿದೇಶಕ್ಕೆ ಶಿಫ್ಟ್​ ಆಗಲಿದೆ.

Exit mobile version