Site icon Vistara News

IPL 2024: ಲಕ್ನೋ ತಂಡಕ್ಕೆ ಭಾರೀ ಆಘಾತ; ಐಪಿಎಲ್​ನಿಂದ ಹೊರ ಬೀಳಲಿದ್ದಾರೆ ಸ್ಟಾರ್​ ವೇಗಿ

IPL 2024

ಲಕ್ನೋ: ಈ ಬಾರಿಯ ಐಪಿಎಲ್‌ನಲ್ಲಿ(IPL 2024) ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್‌ ಯಾದವ್‌(Mayank Yadav) ಗಾಯಾಳಾಗಿ ಐಪಿಎಲ್​ ಟೂರ್ನಿಯಿಂದ ಹೊರ ಬೀಳುವುದು ಬಹುತೇಕ ಖಚಿತ ಎಂದು ವರದಿಯಾಗಿದೆ. 21ರ ಹರೆಯದ ಅವರು ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದಾರೆ.

ಮಾಯಾಂಕ್‌ ಗಾಯದ ಬಗ್ಗೆ ಮಾಹಿತಿ ನೀಡಿರುವ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಮುಖ್ಯ ಕೋಚ್​ ಜಸ್ಟೀನ್​ ಲ್ಯಾಂಗರ್(Justin Langer)​, ನಮ್ಮ ತಂಡದ ಪ್ರಧಾನ ಬೌಲಿಂಗ್​ ಅಸ್ತ್ರವಾಗಿರುವ ಮಾಯಾಂಕ್‌ ಯಾದವ್‌ ಇನ್ನೂ ಚೇತರಿಕೆ ಕಂಡಿಲ್ಲ. ಹೀಗಾಗಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಅನುಮಾನ. ಅವರ ಚೇತರಿಕೆ ಮತ್ತು ಫಿಟ್​ನೆಸ್​ಗಾಗಿ ಇನ್ನೂ ಕೆಲವು ದಿನಗಳು ಬೇಕಾಗಿದೆ ಎಂದು ಹೇಳಿದರು. ಲ್ಯಾಂಗರ್​ ಹೇಳಿಕೆ ಗಮನಿಸುವಾಗ ಮಯಾಂಕ್​ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯುವುದು ಖಚಿತವಾದಂತಿದೆ.

ಇಂಡಿಯನ್ ಎಕ್ಸ್​ಪ್ರೆಸ್​ ವರದಿಯ ಪ್ರಕಾರ ಮಾಯಾಂಕ್‌ ಯಾದವ್‌ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡುವ ಸಲುವಾಗಿ ಬಿಸಿಸಿಐ ಅವರಿಗೆ ಐಪಿಎಲ್​ನಿಂದ ವಿಶ್ರಾಂತಿ ಪಡೆಯಲು ಸೂಚಸಿದೆ ಎಂದು ತಿಳಿಸಿದೆ. ಚೇತರಿಕೆ ಕಂಡು ಐಪಿಎಲ್​ ಆಡಿದರೆ ಮತ್ತೆ ಗಾಯಕ್ಕೀಡಾಗಬಹುದು ಎನ್ನುವ ಮುಂಜಾಗ್ರತೆಯಿಂದ ಬಿಸಿಸಿಐ ಅವರಿಗೆ ಐಪಿಎಲ್​ ಆಡದಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಈ ಐಪಿಎಲ್‌ನಲ್ಲಿ ಗಂಟೆಗೆ 156.7 ಕಿ.ಮೀ. ವೇಗದಲ್ಲಿ ಎಸೆತವನ್ನಿಕ್ಕುವ ಮೂಲಕ ಪ್ರಸಿದ್ಧಿಗೆ ಬಂದಿದ್ದರು.

ಇದನ್ನೂ ಓದಿ IPL 2024 Points Table: ಆರ್​ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಮುಂಬೈ

ಯಾರೀ ಮಯಾಂಕ್ ಯಾದವ್?

ದೆಹಲಿಯಲ್ಲಿ ಪೊಲೀಸ್ ವಾಹನಗಳಿಗೆ ಸೈರನ್ ಅಳವಡಿಸುವ ಸಣ್ಣ ಉದ್ಯಮ ನಡೆಸುತ್ತಿರುವ ಪ್ರಭು ಯಾದವ್ ಅವರ ಮಗ ಮಯಾಂಕ್. ಚಿಕ್ಕಂದಿನಿಂದ ವೇಗದ ಬೌಲರ್ ಆಗಬೇಕು ಎನ್ನುವ ಕನಸು. ಆತನ ಕನಸಿಗೆ ಎಲ್ಲಾ ರೀತಿಯ ಸಪೋರ್ಟ್ ಅಪ್ಪನದ್ದು. ಮಗನನ್ನು ಕರೆದುಕೊಂಡು ದೆಹಲಿಯ ಎಲ್ಲ ಕ್ರಿಕೆಟ್ ಕ್ಲಬ್ ಬಾಗಿಲು ಬಡಿದರೂ ಯಾರೂ ಅವರನ್ನು ಕರೆದು ಮಾತನಾಡಿಸಲಿಲ್ಲ. ಯಾರೂ ಒಳಗೆ ಬಿಡಲಿಲ್ಲ. ಕೊನೆಗೆ ಅಪ್ಪ ದುಂಬಾಲು ಬಿದ್ದ ನಂತರ ಪ್ರಸಿದ್ಧವಾದ ಸಾನೆಟ್ ಕ್ಲಬ್ ಆತನ ಮೇಲೆ ಭರವಸೆ ಇಟ್ಟಿತು. ಖ್ಯಾತ ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಆತನ ಪ್ರತಿಭೆಯನ್ನು ಗುರುತಿಸಿದರು. ಆತನ ಶಕ್ತಿಶಾಲಿ ಮತ್ತು ಉದ್ದವಾದ ತೋಳುಗಳಿಗೆ ಹೈ ಆರ್ಮ್ ಆಕ್ಷನ್ ಕಲಿಸಿಕೊಟ್ಟರು. ವೇಗದ ಜೊತೆಗೆ ನಿಖರತೆ, ಗುಡ್ ಲೆಂಥ್, ನಿಯಂತ್ರಣ, ಬೌನ್ಸ್, ಸ್ವಿಂಗ್ ಎಲ್ಲವನ್ನೂ ಕಲಿಸಿದರು. ಮಯಾಂಕ್ ಎಲ್ಲವನ್ನೂ ವೇಗವಾಗಿ ಕಲಿಯುತ್ತಾ ಹೋದರು. ಕೋಚ್ ತಾರಕ್ ಸಿನ್ಹಾ ಆತನಿಗೆ ಪ್ರತಿಭೆಗೆ ಮಾರುಹೋಗಿ ಶುಲ್ಕವನ್ನು ಪಡೆಯದೆ ಆತನಿಗೆ ಕೋಚಿಂಗ್ ನೀಡಿದರು.

2021ರ ವಿಜಯ ಹಜಾರೆ ಟ್ರೋಫಿಗೆ ಆತನಿಗೆ ಅವಕಾಶ ದೊರಕಿದ್ದು ಆತನ ಭಾಗ್ಯದ ಬಾಗಿಲು ತೆರೆಯುವಂತೆ ಮಾಡಿತ್ತು. ಗುರುಶರಣ್ ಸಿಂಘ್ ಆತನನ್ನು ದೊಡ್ಡ ರೀತಿಯಲ್ಲಿ ಪ್ರಭಾವ ಬಳಸಿ ದೆಹಲಿ ತಂಡಕ್ಕೆ ಆಯ್ಕೆ ಆಗುವಂತೆ ಮಾಡಿದ್ದರು. ಮೊದಲ ವರ್ಷದ ಎರಡು ಪಂದ್ಯಗಳಲ್ಲಿ ಆರು ವಿಕೆಟ್ ಪಡೆದಾಗ, ಮುಂದಿನ ವರ್ಷ ಮತ್ತೆ ಹತ್ತು ವಿಕೆಟ್ ಪಡೆದಾಗ ಕ್ರಿಕೆಟ್ ಪಂಡಿತರು ಹುಬ್ಬೇರಿಸಿ ಆತನನ್ನು ಗಮನಿಸಿದರು. ಕಪಿಲ್ ದೇವ್, ಚೇತನ್ ಶರ್ಮಾ, ಆಶೀಶ್ ನೆಹ್ರಾ, ವರುಣ್ ಆರೋನ್, ಉಮ್ರಾನ್ ಮಲಿಕ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅಜಿತ್ ಅಗರ್ಕರ್, ಇರ್ಫಾನ್ ಪಠಾಣ್ ಮೊದಲಾದ ವೇಗದ ಬೌಲಿಂಗ್ ಲೆಜೆಂಡಗಳ ಸಾಲಿನಲ್ಲಿ ಒಬ್ಬ ಉತ್ತರಾಧಿಕಾರಿ ದೊರೆತಿದ್ದಾನೆ ಎಂದು ಕೊಂಡಾಡಿದರು. ಕ್ರಿಕೆಟ್ ಪಂಡಿತರ ನಿರೀಕ್ಷೆಗೆ ಸರಿಯಾಗಿ ಮಯಾಂಕ್ ಆಟವಾಡುತ್ತ ಹೋದರು. ದೆಹಲಿ ಪರವಾಗಿ ಹಲವು ರಣಜಿ ಪಂದ್ಯಗಳನ್ನೂ ಆಡಿದರು.

Exit mobile version