Site icon Vistara News

IPL 2024: ಕ್ರಿಕೆಟ್​ ಅಭಿಮಾನಿಗಳಿಗೆ ಇಂದು ಭರ್ಜರಿ ರಸದೌತಣ; ಒಂದೇ ದಿನ 2 ಪಂದ್ಯ

IPL 2024

ಬೆಂಗಳೂರು: ಇಂದು(ಭಾನುವಾರ) ಐಪಿಎಲ್(IPL 2024)​ ಅಭಿಮಾನಿಗಳಿಗೆ ದಿನವಿಡೀ ಕ್ರಿಕೆಟ್​ ಮನರಂಜನೆ ಸಿಗಲಿದೆ. ಇಂದು ಡಬಲ್​ ಹೆಡರ್​ ಪಂದ್ಯಗಳು ನಡೆಯಲಿವೆ. ಅದು ಕೂಡ ಬಲಿಷ್ಠ ತಂಡಗಳ ನಡುವೆ. ಹಗಲು ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ಮತ್ತು ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ 5 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಮತ್ತು ಮುಂಬೈ ಇಂಡಿಯನ್ಸ್​(Mumbai Indians) ಕಾದಾಟ ನಡೆಸಲಿದೆ.

ಬದ್ಧ ವೈರಿಗಳ ನಡುವಿನ ಕಾದಾಟ


ಐಪಿಎಲ್‌ನ(IPL 2024) ಅತ್ಯಂತ ಯಶಸ್ವಿ ಮತ್ತು ಬದ್ಧ ಎದುರಾಳಿ ತಂಡಗಳೆಂದೇ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್(CSK vs MI)​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡಗಳ ಸೆಣಾಟಕ್ಕೆ ವೇದಿಕೆಯೊಂದು ಸಿದ್ಧವಾಗಿದೆ. ಇತ್ತಂಡಗಳ ಈ ಕಾದಾಟಕ್ಕೆ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ.

ಧೋನಿ-ರೋಹಿತ್​ ಪಂದ್ಯದ ಪ್ರಮುಖ ಆಕರ್ಷಣೆ


ಪಂದ್ಯ ಆರಂಭಕ್ಕೂ ಮುನ್ನವೇ ಉಭಯ ತಂಡಗಳ ಮಧ್ಯೆ ಕಾತರ, ರೋಷ ಎಲ್ಲವು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಾವೇ ಬಲಿಷ್ಠ ಎಂದು ಕಿತ್ತಾಟ ಕೂಟ ಆರಂಭವಾಗಿದೆ. ಮಾಜಿ ನಾಯಕರಾದ ಧೋನಿ ಮತ್ತು ರೋಹಿತ್​ ಶರ್ಮ ನಡುವಿನ ಫೈಟ್​ ಎಂದೇ ಅಭಿಮಾನಿಗಳು ಈ ಪಂದ್ಯವನ್ನು ಬಿಂಬಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಧೋನಿ ಮತ್ತು ರೋಹಿತ್​ ನಾಯಕತ್ವದಲ್ಲಿ ಉಭಯ ತಂಡಗಳು ಒಟ್ಟು 4 ಬಾರಿ ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾದದ್ದು. 4 ಬಾರಿಯ ಪ್ರಶಸ್ತಿ ಕಾಳಗದಲ್ಲಿ ಮುಂಬೈ ತಂಡ ಚೈನ್ನೈ ವಿರುದ್ಧ ಮೂರು ಪಂದ್ಯಗಳನ್ನು ಗೆದ್ದಿದೆ. ಚೆನ್ನೈ ಒಂದು ಬಾರಿ ಮಾತ್ರ ಗದ್ದಿದೆ.

ಲಕ್ನೋ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್


ದಿನದ ಮೊದಲ ಪಂದ್ಯದಲ್ಲಿ 2ನೇ ಸ್ಥಾನಿ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಉಭಯ ತಂಡಗಳು ಇದುವರೆಗೆ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಈ ಮೂರೂ ಪಂದ್ಯಗಳನ್ನು ಕೂಡ ಲಕ್ನೋ ತಂಡ ಗೆದ್ದು ಬೀಗಿದೆ. ಹೀಗಾಗಿ ಕೆಕೆಆರ್​ ತಂಡ ಲಕ್ನೋ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಲಕ್ನೋ ತಂಡ ವಿಶೇಷ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಇದನ್ನೂ ಓದಿ IPL 2024 Points Table: ಪಂಜಾಬ್​ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ರಾಜಸ್ಥಾನ್

ಭಾರತದ ಅತ್ಯಂತ ಪ್ರಸಿದ್ಧ ಫುಟ್ಬಾಲ್​ ತಂಡವಾದ ATK ಮೋಹನ್ ಬಗಾನ್(Mohun Bagan) ತಂಡದ ಜೆರ್ಸಿಯಲ್ಲಿ ಲಕ್ನೋ ತಂಡ ಕಣಕ್ಕಿಳಿಯಲಿದೆ. ಐತಿಹಾಸಿಕ ಫುಟ್ಬಾಲ್‌ ಕ್ಲಬ್‌ಗೆ ಗೌರವ ಸೂಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಂಡದ ಮಾಲಿಕ ಸಂಜೀವ್ ಗೋಯೆಂಕಾ ತಿಳಿಸಿದ್ದಾರೆ. ಸಂಜೀವ್ ಗೋಯೆಂಕಾ ಅವರು ಮೋಹನ್ ಬಗಾನ್ ತಂಡದ ಮಾಲಿಕರೂ ಆಗಿದ್ದಾರೆ. ಟ್ರೇಡಿಂಗ್​ ಮೂಲಕ ರಾಜಸ್ಥಾನ್​ ತಂಡದಿಂದ ಲಕ್ನೋ ಸೇರಿದ ದೇವದತ್ತ ಪಡಿಕ್ಕಲ್​ ಅವರು ಆಡಿದ 5 ಪಂದ್ಯಗಳಲ್ಲಿಯೂ ಒಂದಂಕಕ್ಕೆ ಸೀಮಿತರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಇವರಿಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ.

Exit mobile version