ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಇದಕ್ಕೂ ಮುನ್ನ ಕಳೆದ 16 ಆವೃತ್ತಿಗಳ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೇಡನ್ ಓವರ್(most maidens) ಎಸೆದ ದಾಖಲೆ ಯಾವ ಆಟಗಾರರ ಹೆಸರಿನಲ್ಲಿದೆ, ಎಷ್ಟು ಮೇಡನ್ ಓವರ್ ಎಸೆದಿದ್ದಾರೆ ಎಂಬ ಸಂಪೂರ್ಣ ವಿವರ ಇಂತಿದೆ.
ಪ್ರವೀಣ್ ಕುಮಾರ್
ಭಾರತ ಕ್ರಿಕೆಟ್ ತಂಡದ ಮಾಜಿ ಸ್ವಿಂಗ್ ಬೌಲರ್ ಪ್ರವೀಣ್ ಕುಮಾರ್(Praveen Kumar) ಅವರು ಐಪಿಎಲ್ನಲ್ಲಿ ಅತಿ ಹೆಚ್ಚು ಮೇಡನ್ ಓವರ್ ಮಾಡಿದ ದಾಖಲೆ ಹೊಂದಿದ್ದಾರೆ. ವಿಶೇಷವೆಂದರೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ ಪದಾಪರ್ಣ ಪಂದ್ಯದಲ್ಲಿಯೂ ಅವರು ಮೇಡನ್ ಓವರ್ ಎಸೆದಿದ್ದರು. ಐಪಿಎಲ್ ವೃತ್ತಿ ಜೀವನದಲ್ಲಿ ಒಟ್ಟು 119 ಪಂದ್ಯಗಳನ್ನು ಆಡಿದ್ದು, 14 ಓವರ್ ಮೇಡನ್ ಎಸೆದಿದ್ದಾರೆ. ಜತೆಗೆ 90 ವಿಕೆಟ್ ಪಡೆದಿದ್ದಾರೆ.
ಭುವನೇಶ್ವರ್ ಕುಮಾರ್
ಟೀಮ್ ಇಂಡಿಯಾದ ಹಿರಿಯ ವೇಗಿ ಭುವನೇಶ್ವರ್ ಕುಮಾರ್(Bhuvneshwar Kumar) ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಸದ್ಯ ಅವರು ಈವರೆಗೆ 160 ಪಂದ್ಯಗಳಿಂದ ಒಟ್ಟು 12 ಓವರ್ ಮೇಡನ್ ಮಾಡಿದ್ದಾರೆ. 170 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಐಪಿಎಲ್ ಆಡುತ್ತಿರುವ ಅವರು ಇನ್ನೂ ಹೆಚ್ಚಿನ ಮೇಡನ್ ಓವರ್ ಎಸೆದರೆ ಅಗ್ರ ಸ್ಥಾನಕ್ಕೇರುವ ಅವಕಾಶವಿದೆ. ಏಕೆಂದರೆ ಮೊದಲ ಸ್ಥಾನದಲ್ಲಿರುವ ಪ್ರವೀಣ್ ಕುಮಾರ್ ಐಪಿಎಲ್ನಿಂದ ನಿವೃತ್ತಿಯಾಗಿದ್ದಾರೆ.
ಟ್ರೆಂಟ್ ಬೌಲ್ಟ್
ನ್ಯೂಜಿಲ್ಯಾಂಡ್ನ ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್(Trent Boult) ಅವರು ಈ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವಿದೇಶಿ ಆಟಗಾರರ ಪೈಕಿ ಇವರಿಗೆ ಮೊದಲ ಸ್ಥಾನ. ಇದುವರೆಗೆ 88 ಐಪಿಎಲ್ ಪಂದ್ಯ ಆಡಿರುವ ಅವರು 105 ವಿಕೆಟ್ ಪಡೆದಿದ್ದಾರೆ. 11 ಮೇಡನ್ ಓವರ್ ಎಸೆದಿದ್ದಾರೆ. ಅಗ್ರಸ್ಥಾನಕ್ಕೇರಲು ಭುವನೇಶ್ವರ್ ಮತ್ತು ಬೌಲ್ಟ್ ಮಧ್ಯೆ ಸದ್ಯ ತೀವ್ರ ಪೈಪೋಟಿ ಇದೆ.
ಇದನ್ನೂ ಓದಿ IPL 2024: ಐಪಿಎಲ್ಗೂ ನೀರಿನ ಸಮಸ್ಯೆ ಬಿಸಿ; ಬೆಂಗಳೂರಿನ ಪಂದ್ಯಗಳು ಅನುಮಾನ!
ಇರ್ಫಾನ್ ಪಠಾಣ್
ಟೀಮ್ ಇಂಡಿಯಾದ ಮಾಜಿ ಎಡಗೈ ವೇಗಿ ಇರ್ಫಾನ್ ಪಠಾಣ್(Irfan Pathan). ಈ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 103 ಪಂದ್ಯಗಳಲ್ಲಿ 10 ಓವರ್‌ಗಳನ್ನು ಮೇಡನ್ ಮಾಡಿದ್ದಾರೆ. 80 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ನಿಂದ ನಿವೃತ್ತಿ ಪಡೆದಿರುವ ಅವರು ಐಪಿಎಲ್ ಕಾಮೆಂಟ್ರಿ ಪ್ಯಾನಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಲಸಿತ್ ಮಾಲಿಂಗ
ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ(Lasith Malinga) ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 122 ಪಂದ್ಯಗಳಲ್ಲಿ 8 ಮೇಡನ್ ಓವರ್ ಎಸೆದಿದ್ದಾರೆ. ಒಟ್ಟು 170 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಸಂದೀಪ್ ಶರ್ಮಾ ಕೂಡ 8 ಮೇಡನ್ ಓವರ್‌ಗಳನ್ನು ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ಕೂಡ 8 ಮೇಡನ್ ಓವರ್‌ಗಳನ್ನು ಎಸೆದಿದ್ದಾರೆ.