Site icon Vistara News

IPL 2024: ಗುಜರಾತ್​ ತಂಡಕ್ಕೆ ಹಿನ್ನಡೆ; ಮೊದಲೆರಡು ಪಂದ್ಯಗಳಿಗೆ ಸ್ಟಾರ್​ ಆಟಗಾರ ಅಲಭ್ಯ

Matthew Wade

ಮುಂಬಯಿ: ಮಾಜಿ ಚಾಂಪಿಯನ್​ ಗುಜರಾತ್(Gujarat Titans)​ ತಂಡಕ್ಕೆ ಐಪಿಎಲ್​ ಆರಂಭಕ್ಕೂ ಮುನ್ನವೇ ಹಲವು ಆಘಾತ ಎದುರಾಗಿತ್ತು. ಇದೀಗ ತಂಡದ ಅನುಭವಿ, ಆಸ್ಟ್ರೇಲಿಯಾದ ಆಟಗಾರ ಮ್ಯಾಥ್ಯೂ ವೇಡ್‌(Matthew Wade) ಅವರು ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದಕ್ಕೆ ಕಾರಣ ಮಾರ್ಚ್​ 21ರಿಂದ 25ರ ತನಕ ನಡೆಯುವ “ಶೆಫೀಲ್ಡ್‌ ಶೀಲ್ಡ್‌’ ಕ್ರಿಕೆಟ್‌ ಫೈನಲ್‌.

ವೇಡ್​ ಅವರು ಶೆಫೀಲ್ಡ್‌ ಶೀಲ್ಡ್‌’ ಕ್ರಿಕೆಟ್‌ ಫೈನಲ್‌ ಆಡುವುದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಅವರು ಮೊದಲೆರಡು ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಫ್ರಾಂಚೈಸಿ ತಿಳಿಸಿದೆ. 2 ಪಂದ್ಯದ ಬಳಿಕ ಅವರು ತಂಡ ಸೇರಲಿದ್ದಾರೆ. ಎಡಗೈ ಬ್ಯಾಟರ್‌ ವೇಡ್‌ ಟಾಸ್ಮೇನಿಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಬಾರಿ ಟೂರ್ನಿಯಲ್ಲಿ ಗುಜರಾತ್‌ ಟೈಟಾನ್ಸ್‌ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 25ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ, ದ್ವಿತೀಯ ಪಂದ್ಯವನ್ನು ಮಾರ್ಚ್​ 27ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲಿದೆ. ವೇಡ್​​ ಅವರು ಮಾರ್ಚ್​ 31ರಂದು ಸನ್‌ರೈಸರ್ ಹೈದರಾಬಾದ್‌ ವಿರುದ್ಧ ನಡೆಯುವ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ.

ಗಿಲ್​ ನಾಯಕ


ಹಾರ್ದಿಕ್​ ಪಾಂಡ್ಯ ಅವರು ಮುಂಬೈ ತಂಡ ಸೇರಿದ ಕಾರಣ ಈ ಬಾರಿ ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್​ ಅವರು ಗುಜರಾತ್​ ತಂಡವನ್ನು ಮುನ್ನಡೆಸಲಿದ್ದಾರೆ. ಚೊಚ್ಚಲ ನಾಯಕತ್ವದಲ್ಲೇ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಭಾರತ ತಂಡದ ನಾಯಕನಾದರೂ ಅಚ್ಚರಿಯಿಲ್ಲ.

ಇದನ್ನೂ ಓದಿ IPL 2024 : ಆರ್​ಸಿಬಿ ಅನ್​ಬಾಕ್ಸ್​ ಟಿಕೆಟ್​ ಮಾರಾಟ ಶುರು, ಎಲ್ಲಿ ಮಾಡಬಹುದು ಖರೀದಿ?

ಶಮಿ ಡೌಟ್​


ಎಡ ಪಾದದ ಗಾಯಕ್ಕೆ(Mohammed Shami Ankle Injury) ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ತಂಡದ ಪ್ರಧಾನ ವೇಗಿ ಮೊಹಮ್ಮದ್​ ಶಮಿ ಅವರು ಈ ಬಾರಿ ಐಪಿಎಲ್​ ಆಡುವುದು ಅನುಮಾನ ಎನ್ನಲಾಗಿದೆ. ಮೂಲಗಳ ಪ್ರಕಾರ ಅವರು ಈಗಾಗಲೇ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ತಮ್ಮ ಮೊನಚಾದ ಬೌಲಿಂಗ್​ ದಾಳಿಯಿಂದ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ಆರಂಭಿಕ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದಿದ್ದರೂ, ಆ ಬಳಿಕ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ವಿಶ್ವಕಪ್​ ಬಳಿಕ ಶಮಿ ಗಾಯದ ಸಮಸ್ಯೆಯಿಂದ ಭಾರತ ಪರ ಆಡಿಲ್ಲ.

Exit mobile version