ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯಲ್ಲಿ ಈಗಾಗಲೇ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಎಲಿಮಿನೇಟ್ ಆಗಿವೆ. ನಿನ್ನೆ (ಮಂಗಳವಾರ) ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ಸೋಲು ಕಂಡ ಪರಿಣಾಮ ರಾಜಸ್ಥಾನ್ ರಾಯಲ್ಸ್(Rajasthan Royals) ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್ಗೆ ಅಧಿಕೃತ ಪ್ರವೇಶ ಪಡೆದಿದೆ. ಒಂದೊಮ್ಮೆ ಲಕ್ನೋ ಗೆಲುವು ಸಾಧಿಸುತ್ತಿದ್ದರೆ, ರಾಜಸ್ಥಾನ್ ಇನ್ನೊಂದು ಗೆಲುವು ಸಾಧಿಸಬೇಕಿತ್ತು.
ರಾಜಸ್ಥಾನ್ ಮತ್ತು ಕೆಕೆಆರ್ ಪ್ಲೇ ಆಫ್ ಟಿಕೆಟ್ ಗಿಟ್ಟಿಸಿಕೊಂಡ ಕಾರಣ ಉಳಿದ 2 ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಚ್ಚರಿ ಎಂದರೆ 7 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಿಯಾಗಿದ್ದ ಆರ್ಸಿಬಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವ ಸ್ಥಿತಿಯಿಂದ ಸತತ ಗೆಲುವಿನೊಂದಿಗೆ ಕಮ್ಬ್ಯಾಕ್ ಮಾಡಿ ಇದೀಗ 6ನೇ ಸ್ಥಾನಿಯಾಗಿದೆ. ಚೆನ್ನೈ ವಿರುದ್ಧ ಗೆದ್ದರೆ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 13 | 9 | 3 | 19 (+1.428) |
ರಾಜಸ್ಥಾನ್ ರಾಯಲ್ಸ್ | 12 | 8 | 4 | 16 (+0.349) |
ಚೆನ್ನೈ | 13 | 7 | 6 | 14 (+0.528) |
ಹೈದರಾಬಾದ್ | 12 | 7 | 5 | 14 (+0.406) |
ಡೆಲ್ಲಿ | 14 | 7 | 7 | 14 (-0.377) |
ಆರ್ಸಿಬಿ | 13 | 6 | 7 | 12 (+0.387) |
ಲಕ್ನೋ | 13 | 6 | 7 | 12 (-0.787) |
ಗುಜರಾತ್ | 13 | 5 | 7 | 11 (-1.063) |
ಮುಂಬೈ | 13 | 4 | 9 | 8 (-0.271) |
ಪಂಜಾಬ್ | 12 | 4 | 8 | 8 (-0.423) |
ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್ಗೆ ತಿರುಗೇಟು ಕೊಟ್ಟ ಗಂಭೀರ್
ಡೆಲ್ಲಿಯ ಪಿಚ್ನಲ್ಲಿ ಲಕ್ನೊ ತಂಡಕ್ಕೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಆ ತಂಡದ ಬ್ಯಾಟರ್ಗಳು ಗೆಲುವಿಗಾಗಿ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇಶಾಂತ್ ಶರ್ಮಾ (34 ರನ್ಗೆ 3 ವಿಕೆಟ್) ಡೆಲ್ಲಿಯ ಬೌಲರ್ಗಳ ಅಬ್ಬರಕ್ಕೆ ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (27 ಎಸೆತಕ್ಕೆ 61 ರನ್) ಹಾಗೂ ಅರ್ಶದ್ ಖಾನ್ (33 ಎಸೆತಕ್ಕೆ 58 ರನ್) ಅವರ ಹೋರಾಟದಿಂದಾಗಿ ಗುರಿಯ ಸನಿಹಕ್ಕೆ ಬಂದು ಮರ್ಯಾದೆ ಉಳಿಸಿಕೊಂಡಿತು. ಕ್ವಿಂಟನ್ ಡಿ ಕಾಕ್ (12), ಕೆ. ಎಲ್ ರಾಹುಲ್ (05), ಮಾರ್ಕಸ್ ಸ್ಟೊಯಿನಿಸ್ (05), ದೀಪಕ್ ಹೂಡ (0) ಆಯುಷ್ ಬದೋನಿ (06), ಅವರ ಅಸಮರ್ಥತೆ ತಂಡವನ್ನು ಸೋಲಿನ ಸುಳಿಗೆ ತಳ್ಳಿತು.