Site icon Vistara News

IPL 2024: ಕಾನ್ವೆ ಬದಲಿಗೆ ಚೆನ್ನೈ ತಂಡ ಸೇರ್ಪಡೆಗೊಂಡ ರಿಚರ್ಡ್ ಗ್ಲೀಸನ್

IPL 2024

ಚೆನ್ನೈ: ನ್ಯೂಜಿಲ್ಯಾಂಡ್​ನ ಆರಂಭಿಕ ಬ್ಯಾಟರ್​, ಚೆನ್ನೈ ತಂಡದ ಆಟಗಾರನಾಗಿದ್ದ ಡೆವೊನ್ ಕಾನ್ವೆ(Devon Conway) ಅವರು ಸಂಪೂರ್ಣವಾಗಿ ಗಾಯದಿಂದ ಚೇತರಿಕೆ ಕಾಣದೆ ಐಪಿಎಲ್​ನಿಂದ(IPL 2024) ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಇಂಗ್ಲೆಂಡ್ ವೇಗಿ ರಿಚರ್ಡ್ ಗ್ಲೀಸನ್(Richard Gleeson) ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಅವರನ್ನು ಮೂಲ ಬೆಲೆ 50 ಲಕ್ಷಕ್ಕೆ ತಂಡಕ್ಕೆ ಸೇರಿಸಲಾಗಿದೆ ಎಂದು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಟೂರ್ನಿ ಆರಂಭಕ್ಕೂ ಮುನ್ನವೇ ಕಾನ್ವೆ ಹೆಬ್ಬೆರಳಿನ ಗಾಯಕ್ಕೀಡಾಗಿದ್ದರು. ಮೊದಲ ಹಂತದ ವೇಳಾಪಟ್ಟಿಯ ಬಳಿಕ ತಂಡ ಸೇರುವ ನಿರೀಕ್ಷೆಯಲ್ಲಿದ್ದರು. ಹೀಗಾಗಿ ಇಷ್ಟು ದಿನ ಚೆನ್ನೈ ಕಾದು ನೋಡುವ ತಂತ್ರ ಮಾಡಿತ್ತು. ಆದರೆ ಅವರು ಗಾಯದಿಂದ ಚೇತರಿಕೆ ಕಾಣುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅಂತಿಮವಾಗಿ ಅವರನ್ನು ತಂಡದಿಂದ ಈ ಆವೃತ್ತಿಗೆ ಕೈಬಿಡಲಾಗಿದೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ವೇಳೆ ಕಾನ್ವೆ ಹೆಬ್ಬೆರಳಿನ ಗಾಯಕ್ಕೀಡಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗ್ಲೀಸನ್ ಇಂಗ್ಲೆಂಡ್​ ಪರ 6 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 9 ವಿಕೆಟ್​ ಕೂಡ ಪಡೆದಿದ್ದಾರೆ.

ಕಾನ್ವೆ ವಿಡಿಯೊ ಮೂಲಕ ತಮ್ಮ ಅಲಭ್ಯತೆಯನ್ನು ಸ್ಪಷ್ಟಪಡಿಸಿದ್ದು, ಚೆನ್ನೈ ತಂಡದ ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ. ಈ ಬಾರಿಯೂ ತಂಡ ಕಪ್​ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ. ಚೆನ್ನೈ ತಂಡ ಈಗಾಗಲೇ 6 ಪಂದ್ಯಗಳಿಂದ ನಾಲ್ಕು ಪಂದ್ಯಗಳನ್ನು ಗೆದ್ದು 8 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹಮಾನ್ ಅವರು ಮೇ 1 ರ ನಂತರ ಐಪಿಎಲ್​ನಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದುಬಂದಿದೆ. ಮೇ 3 ರಿಂದ ಬಾಂಗ್ಲಾದೇಶ ತಂಡ ತನ್ನ ತವರಿನಲ್ಲಿ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯನ್ನಾಡಲು ಅವರು ತವರಿಗೆ ಮರಳಲಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಅವರು ಚೆನ್ನೈ ತಂಡದಿಂದ ಹೊರಗುಳಿದರೆ ಅವರ ಸ್ಥಾನದಲ್ಲಿ ಗ್ಲೀಸನ್ ಆಡುವ ಅವಕಾಶ ಪಡೆಯಬಹುದು.

ನಾಳೆ(ಶುಕ್ರವಾರ) ನಡೆಯುವ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​(hennai Super Kings) ತಂಡ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಆಡಲಿದೆ. ಲಕ್ನೋಗೆ(Lucknow Super Giants) ತವರಿನ ಪಂದ್ಯವಾಗಿದೆ. ಪ್ಲೇ ಆಫ್​​ ಪ್ರವೇಶದ ಹಿನ್ನೆಲೆ ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯ.

Exit mobile version