Site icon Vistara News

IPL 2024: ಆರ್​ಸಿಬಿ ಸೋಲಿಗೆ ನೈಜ ಕಾರಣ ತಿಳಿಸಿದ ನಾಯಕ ಡು ಪ್ಲೆಸಿಸ್‌

IPL 2024

ಮುಂಬಯಿ: ಆರ್​ಸಿಬಿ(RCB) ತಂಡ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಆಡಿದ 6 ಪಂದ್ಯಗಳ ಪೈಕಿ 5 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಹೊರಬೀಳುವ ಆತಂಕಕ್ಕೆ ಸಿಲುಕಿದೆ. ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ 7 ವಿಕೆಟ್​ ಹೀನಾಯ ಸೋಲು ಕಂಡಿತು. ಈ ಸೋಲಿನ ಬಳಿಕ ತಂಡ ಹಿನ್ನಡೆಗೆ ಏನು ಕಾರಣ ಎಂಬುದನ್ನು ನಾಯಕ ಫಾಫ್​ ಡು ಪ್ಲೆಸಿಸ್​(Faf Du Plessis) ತಿಳಿಸಿದ್ದಾರೆ. ನಮ್ಮ ತಂಡದಲ್ಲಿ ಸಾಕಷ್ಟು ಬೌಲಿಂಗ್ ಅಸ್ತ್ರಗಳಿಲ್ಲ. ಹಾಗಾಗಿ, ನಮ್ಮ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಬೇಕು ಎಂದು ಸೋಲಿನ ಕಾರಣವನ್ನು ತಿಳಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಡುಪ್ಲೆಸಿಸ್​, ‘ನಮ್ಮ ತಂಡದ ಪ್ರಮುಖ ವೈಫಲ್ಯವೆಂದರೆ ಬೌಲಿಂಗ್​. ಹೀಗಾಗಿ ಬ್ಯಾಟರ್​ಗಳು ಹೆಚ್ಚಿನ ರನ್​ಗಳಿಕೆಗೆ ಗಮನ ನೀಡಬೇಕು. ಇನ್ನುಳಿದ ಪ್ರತಿ ಪಂದ್ಯದಲ್ಲಿಯೂ ನಾವು 200ಕ್ಕೂ ಹೆಚ್ಚು ರನ್ ಗಳಿಸಬೇಕಿದೆ. ಇದು ಸಾಧ್ಯವಾಗದಿದ್ದರೆ ಮತ್ತೆ ಸೋಲು ಖಚಿತ ಎಂದು ಬೇಸರದಿಂದಲೇ ಹೇಳಿದ್ದಾರೆ.

ಇತರ ತಂಡದ ಪರ ವಿಕೆಟ್​ ಟೇಕರ್​ ಬೌಲರ್​ಗಳಿದ್ದಾರೆ. ಆದರೆ ನಮ್ಮ ತಂಡದಲ್ಲಿ ಇದರ ಕೊರತೆ ಎದ್ದು ಕಾಣುತ್ತಿದೆ. ಆರಂಭದಲ್ಲಿ ವಿಕೆಟ್ ತೆಗೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಠಿಣವಾಗಿದೆ. ಟಾಸ್ ಗೆದ್ದಿದ್ದರೆ ಗೆಲುವು ಸಾಧ್ಯವಾಗುತ್ತಿತ್ತು. ತಂಡಕ್ಕೆ 220 ರನ್ ಅಗತ್ಯವಿತ್ತು. ಇಬ್ಬನಿಯು ಸಹ ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿತ್ತು. ಹಲವೆಡೆ ಒದ್ದೆಯಾದ ಮೈದಾನ ಪಂದ್ಯದ ಗತಿ ಬದಲಿಸಿದೆ. ನಾವು ಚೆಂಡನ್ನು ಹಲವು ಬಾರಿ ಬದಲಾಯಿಸಿದ್ದೇವೆ ಆದರೂ ಬೌಲರ್​ಗಳು ಯಶಸ್ಸು ಕಾಣಲಿಲ್ಲ ಎಂದು ಸೋಲಿನ ಬಳಿಕ ಡು ಪ್ಲೆಸಿಸ್​ ಹೇಳಿದರು.

ಇದನ್ನೂ ಓದಿ IPL 2024: ಲಕ್ನೋ ತಂಡಕ್ಕೆ ಭಾರೀ ಆಘಾತ; ಐಪಿಎಲ್​ನಿಂದ ಹೊರ ಬೀಳಲಿದ್ದಾರೆ ಸ್ಟಾರ್​ ವೇಗಿ

ಅನುಭವಿ ವೇಗಿ ಮೊಹಮ್ಮದ್​ ಸಿರಾಜ್​ ಈ ಪಂದ್ಯದಲ್ಲಿ ಅತ್ಯಂತ ಕಳಪೆ ಮಟ್ಟದ ಬೌಲಿಂಗ್​ ಪ್ರದರ್ಶನ ತೋರಿದರು. 3 ಓವರ್​ಗೆ 37 ರನ್​ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಆಕಾಶ್​ ದೀಪ್​ ಅವರು ಮೊದಲ ಓವರ್​ನಲ್ಲಿ ಮಿಂಚಿದರೂ ಕೂಡ ಆ ಬಳಿಕದ ಓವರ್​ನಲ್ಲಿ ಸರಿಯಾಗಿ ದಂಡಿಸಿಕೊಂಡರು. 3.3 ಓವರ್​ನಿಂದ 55 ರನ್​ ಬಿಟ್ಟುಕೊಟ್ಟರು. ಮ್ಯಾಕ್ಸ್​ವೆಲ್​ ಒಂದೇ ಓವರ್​ನಲ್ಲಿ 17 ರನ್​ ಹೊಡೆಸಿಕೊಂಡರು. ಒಟ್ಟಾರೆಯಾಗಿ ಬೌಲಿಂಗ್​ ನಡೆಸಿದ ಆರೂ ಮಂದಿಯೂ 10ರ ಸರಾಸರಿಯಲ್ಲಿ ರನ್​ ಬಿಟ್ಟುಕೊಟ್ಟರು.

ಈ ಪಂದ್ಯದಲ್ಲಿ ಡು ಪ್ಲೆಸಿಸ್ ಬಿರುಸಿನ ಬ್ಯಾಟಿಂಗ್​ ನಡೆಸಿ 40 ಎಸತಗಳಿಂದ 61 ರನ್ (4 ಬೌಂಡರಿ, 3 ಸಿಕ್ಸರ್​)​ ಬಾರಿಸಿದರು. ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದ ರಜತ್​ ಪಾಟಿದಾರ್​ ಈ ಪಂದ್ಯದಲ್ಲಿ 25 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿ ತಮ್ಮ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡರು. ದಿನೇಶ್​ ಕಾರ್ತಿಕ್​ 23 ಎಸೆತಗಳಿಂದ ಅಜೇಯ 53 ರನ್​ ಬಾರಿಸಿದರು. ಆದರೆ ಪಂದ್ಯ ಸೋತ ಕಾರಣದಿಂದ ಇವರೆಲ್ಲರ ಹೋರಾಟ ವ್ಯರ್ಥಗೊಂಡಿತು.

Exit mobile version