Site icon Vistara News

IPL 2024: ಆರ್​ಸಿಬಿ ಪಂದ್ಯದ ವೇಳೆ ಕಳಪೆ ಆಹಾರ ವಿತರಣೆ: ಕೆಎಸ್​ಸಿಎ ವಿರುದ್ಧ ಎಫ್ಐಆರ್

IPL 2024

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಡೆಲ್ಲಿ ಮತ್ತು ಆರ್​ಸಿಬಿ(DC vs RCB) ನಡುವೆ ಮೇ 12ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M.Chinnaswamy Stadium) ನಡೆದಿದ್ದ ಪಂದ್ಯದ ವೇಳೆ ಪ್ರೇಕ್ಷಕರಿಗೆ ಕಳಪೆ ಆಹಾರ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(Karnataka State Cricket Association) ಆಡಳಿತ ಮಂಡಳಿ (KSCA) ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೇ 12ರಂದು ಐಪಿಎಲ್ ವೀಕ್ಷಣೆ ಬಂದಿದ್ದ 23 ವರ್ಷದ ಚೈತನ್ಯ ಕತಾರ್ ಏರ್ ವೇಸ್ ಫ್ಯಾನ್ಸ್ ಟರೇಸ್ ಸ್ಟ್ಯಾಂಡಿನ ಕ್ಯಾಂಟಿನ್ ನಿಂದ ಊಟ ಸೇವಿಸಿದ್ದ ನಂತರ ಕೆಲವೇ ನಿಮಿಷಗಳಲ್ಲಿ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾನು ಕುಳಿತುಕೊಂಡಿದ್ದ ಜಾಗದಲ್ಲಿಯೇ ಚೈತನ್ಯ ಕುಸಿದುಬಿದ್ದಿದ್ದಾನೆ. ತಕ್ಷಣ ಸ್ಟೇಡಿಯಂ ಸಿಬ್ಬಂದಿ ನೆರವಿನಿಂದ ಆತನಿಗೆ ಆ್ಯಂಬುಲೆನ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು‌. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚೈತನ್ಯರನ್ನು ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

ಈ ಸಂಬಂಧ ತಮ್ಮ ಆರೋಗ್ಯ ಹದಗೆಡಲು ಕ್ಯಾಂಟಿನ್​ನಲ್ಲಿ ನೀಡಿದ ಆಹಾರವೇ ಕಾರಣ ಎಂದು ಚೈತನ್ಯ ಕೆಎಸ್​ಸಿಎ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಕೆಎಸ್​ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ವೇಳೆ ಕಳಪೆ ಆಹಾರ ನೀಡುತ್ತಿರುವ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಇಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಇಲ್ಲಿನ ಆಹಾರ ವಿತರಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿದ್ದರು. ಇನ್ನಾದರೂ ಕೆಎಸ್​ಸಿಎ ಈ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಆಹಾರ ನೀಡುವ ಕೆಲಸವನ್ನು ಮಾಡಬೇಕಿದೆ. ಡೆಲ್ಲಿ ವಿರುದ್ಧದ ಈ ಪಂದ್ಯವನ್ನು ಆರ್​ಸಿಬಿ 47 ರನ್​ ಅಂತರದಿಂದ ಗೆದ್ದು ಬೀಗಿತ್ತು.

ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!


ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ವರದಿ ಕೇಳಿತ್ತು. ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ.

Exit mobile version