Site icon Vistara News

IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

IPL 2024

ಲಕ್ನೋ: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ (IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ಗೆ 24 ಲಕ್ಷ ರೂ. ದಂಡ ವಿಧಿಸಿದೆ. ಇದು ಪಾಂಡ್ಯ ಅವರ 2ನೇ ಪ್ರಕರಣವಾಗಿದೆ. ನಾಯಕನ ಈ ತಪ್ಪಿನಿಂದ ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಇತರ ಎಲ್ಲ ಆಟಗಾರರಿಗೆ ವೈಯಕ್ತಿಕವಾಗಿ 6 ಲಕ್ಷ ಅಥವಾ ಅವರ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಲಾಗಿದೆ.

“ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್​ನ 48ನೇ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ವಿಧಿಸಲಾಗಿದೆ. ಈ ಸೀಸನ್‍ನಲ್ಲಿ ಇದು ತಂಡದ ಎರಡನೇ ಅಪರಾಧವಾಗಿದ್ದು, ಐಪಿಎಲ್ ನೀತಿಸಂಹಿತೆ ಅನ್ವಯ, ಕನಿಷ್ಠ ಓವರ್ ದರವನ್ನು ನಿರ್ವಹಿಸಬೇಕಾಗುತ್ತದೆ. ಈ ಅಪರಾಧಕ್ಕಾಗಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಹೇಳಿಕೆ ನೀಡಿದೆ.

ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಆಡಿದ ಎಲ್ಲ ಇತರ 11 ಮಂದಿ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯದ ಸಂಭಾವನೆಯ ಶೇ. 25 ದಂಡ ವಿಧಿಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ. ಕಳೆದ ಏಪ್ರಿಲ್​ 18ರಂದು ನಡೆದಿದ್ದ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿಯೂ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಪಾಂಡ್ಯಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿತ್ತು.

ಇದನ್ನೂ ಓದಿ IPL 2024 Points Table: 3ನೇ ಸ್ಥಾನಕ್ಕೇರಿದ ಲಕ್ನೋ; ಕುಸಿತ ಕಂಡ ಹಾಲಿ ಚಾಂಪಿಯನ್​ ಚೆನ್ನೈ

ಇನ್ನೊಂದು ಬಾರಿ ತಪ್ಪು ಮರುಕಳಿಸಿದರೆ ಒಂದು ಪಂದ್ಯ ನಿಷೇಧ


ಸ್ಲೋ ಓವರ್​ ರೇಟ್​ ನಿಯಮದ ಪ್ರಕಾರ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಒಂದೊಮ್ಮೆ ಮೂರನೇ ಬಾರಿ ಮತ್ತೆ ಇದೇ ತಪ್ಪು ಮರುಕಳಿಸಿದರೆ ಆಗ ನಾಯಕ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಲಿದ್ದಾರೆ.

ಮುಂಬೈಗೆ ಸೋಲು

ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಬ್ಯಾಟರ್​ಗಳು ಲಕ್ನೋ ಬೌಲರ್​ಗಳ ಬಿಗು ದಾಳಿಗೆ ಕುಸಿದು 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಜವಾಬಿತ್ತ ಲಕ್ನೊ ತಂಡ 19.2 ಓವರ್​ಗಳು 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

Exit mobile version