ಬೆಂಗಳೂರು: ಮಹಿಳಾ ಆರ್ಸಿಬಿ(RCB) ತಂಡ ಕಪ್ ಗೆದ್ದ ಬೆನ್ನಲ್ಲೇ ಈ ಬಾರಿ ಹೊಸ ಅಧ್ಯಾಯ ಎಂದು ಐಪಿಎಲ್(IPL 2024) ಆಡಲಿಳಿದ ಆರ್ಸಿಬಿ ಪುರುಷರ ತಂಡ ತನ್ನ ಮಾತಿಗೆ ತಕ್ಕ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲವಾಗಿದೆ. ಆರ್ಸಿಬಿಯ ಈ ಕಳಪೆ ಆಟ ಕಂಡು ಸ್ವತಃ ಅಭಿಮಾನಿಗಳೇ ಇದು ಮುಗಿದ ಅಧ್ಯಾಯ ಎಂದು ಟ್ರೋಲ್ ಮಾಡಲಾರಂಭಿಸಿದ್ದಾರೆ. 6 ಪಂದ್ಯಗಳನ್ನಾಡಿ ಕೇವಲ 1 ಪಂದ್ಯ ಗೆದ್ದಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ ಆರ್ಸಿಬಿಗೆ ಇನ್ನೂ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಇದಕ್ಕಾಗಿ ಆರ್ಸಿಬಿ ಈ ಕೆಲಸ ಮಾಡಬೇಕಿದೆ.
ಪ್ಲೇ ಆಫ್ ಪ್ರವೇಶ ಹೇಗೆ?
ಆರ್ಸಿಬಿಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ 7 ಪಂದ್ಯ ಗೆದ್ದರೆ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶ ಪಡೆಯಬಹುದು. 7 ಪಂದ್ಯ ಗೆದ್ದರೆ 16 ಅಂಕ ಸಿಗಲಿದೆ. ಈಗಾಗಲೇ ಒಂದು ಪಂದ್ಯ ಗೆದ್ದಿದೆ. ಒಂದೊಮ್ಮೆ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ 2 ಪಂದ್ಯ ಸೋತರೆ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಇನ್ನೊಂದು ಅವಕಾಶವೆಂದರೆ ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಆಗ ಕ್ಷೀಣ ಅವಕಾಶವೊಂದು ಲಭಿಸುವ ಸಾಧ್ಯತೆಯೂ ಇದೆ. ಒಟ್ಟಾರೆಯಾಗಿ ಆರ್ಸಿಬಿಗೆ ಮುಂದಿನ ಪಂದ್ಯಗಳು ಮಸ್ಟ್ ವಿನ್ ಗೇಮ್ ಆಗಿದೆ.
ತಂಡದದಲ್ಲಿ ಸ್ಟಾರ್ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಬೌಲಿಂಗ್ ವಿಭಾಗವಂತೂ ಕೇಳುವುದೇ ಬೇಡ ಉಳಿದೆಲ್ಲ ತಂಡಕ್ಕಿಂತ ಕಳಪೆ ಮಟ್ಟದಲ್ಲಿದೆ. ಭಾರತ ತಂಡದ ಪ್ರಧಾನ ವೇಗಿಗಳಲ್ಲಿ ಒಬ್ಬರಾಗಿರುವ ಸಿರಾಜ್ ಓವರ್ಗೆ ಕನಿಷ್ಠ 20ಕ್ಕಿಂತ ಅಧಿಕ ರನ್ ಚಚ್ಚಿಸಿಕೊಳ್ಳುತ್ತಿದ್ದಾರೆ. ಅದೂ ಕೂಡ ಅನಾನುಭವಿ ಬ್ಯಾಟರ್ಗಳ ಮುಂದೆ.
Faf Du Plessis said, "from a batting perspective, we need to push for 210-220 now. We don't have enough weapons in the bowling". pic.twitter.com/Z8oBH88DY7
— Mufaddal Vohra (@mufaddal_vohra) April 11, 2024
ಆರ್ಸಿಬಿ ಮುಂದಿನ ಪಂದ್ಯದಲ್ಲಿ ಏಪ್ರಿಲ್ 15ರಂದು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಂಬೈ ವಿರುದ್ಧ ಸೋಲಿನ ಬಳಿಕ ಮಾತನಾಡಿದ್ದ ನಾಯಕ ಡುಪ್ಲೆಸಿಸ್, ‘ನಮ್ಮ ತಂಡದ ಪ್ರಮುಖ ವೈಫಲ್ಯವೆಂದರೆ ಬೌಲಿಂಗ್. ಹೀಗಾಗಿ ಬ್ಯಾಟರ್ಗಳು ಹೆಚ್ಚಿನ ರನ್ಗಳಿಕೆಗೆ ಗಮನ ನೀಡಬೇಕು. ಇನ್ನುಳಿದ ಪ್ರತಿ ಪಂದ್ಯದಲ್ಲಿಯೂ ನಾವು 200ಕ್ಕೂ ಹೆಚ್ಚು ರನ್ ಗಳಿಸಬೇಕಿದೆ. ಇದು ಸಾಧ್ಯವಾಗದಿದ್ದರೆ ಮತ್ತೆ ಸೋಲು ಖಚಿತ ಎಂದು ಬೇಸರದಿಂದಲೇ ಹೇಳಿದ್ದರು.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 5 | 4 | 1 | 8 (+0.871) |
ಕೆಕೆಆರ್ | 4 | 3 | 1 | 6 (+1.528) |
ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 6 (+0.666) |
ಲಕ್ನೋ ಸೂಪರ್ಜೈಂಟ್ಸ್ | 5 | 3 | 2 | 6(+0.436) |
ಹೈದರಾಬಾದ್ | 5 | 3 | 2 | 6 (+0.344) |
ಗುಜರಾತ್ | 6 | 3 | 3 | 6 (-0.637) |
ಮುಂಬಯಿ | 5 | 2 | 3 | 4 (-0.073) |
ಪಂಜಾಬ್ | 5 | 2 | 3 | 4 (-0.196) |
ಡೆಲ್ಲಿ ಕ್ಯಾಪಿಟಲ್ಸ್ | 6 | 2 | 4 | 4 (-0.975) |
ಆರ್ಸಿಬಿ | 6 | 1 | 5 | 2 (-1.124) |