ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024) ಆರಂಭಕ್ಕೆ ಕೌನ್ ಡೌನ್ ಶುರುವಾಗಿದೆ. ಇದೇ ಶುಕ್ರವಾರ(ಮಾರ್ಚ್ 22)ದಂದು ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ಕಣಕ್ಕಿಳಿಯಲಿದೆ. ಈ ಹಿಂದಿನ 16 ಆವೃತ್ತಿಯ ಐಪಿಎಲ್ ವಿಜೇತರ(IPL Winners List) ಪಟ್ಟಿಯೊಂದು(IPL Winners List from 2008 to 2024) ಇಲ್ಲಿದೆ.
ರಾಜಸ್ಥಾನ್ ರಾಯಲ್ಸ್(2008)
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್(Rajasthan Royals) ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 163 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದನ್ನೂ ಓದಿ IPL 2024: ಐಪಿಎಲ್ ವೇಳೆ ತಾಳ್ಮೆ ಕಳೆದುಕೊಂಡಿದ್ದ ಧೋನಿಗೂ ಬಿದ್ದಿತ್ತು ದಂಡದ ಬರೆ
ಡೆಕ್ಕನ್ ಚಾರ್ಜಸ್(2009)
ಆ್ಯಡಂ ಗಿಲ್‌ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್(Deccan Chargers) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು. ಇದೇ ಆವೃತ್ತಿಯಲ್ಲಿ ರೋಹಿತ್ ಶರ್ಮ ಅವರು ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆಯನ್ನೂ ಮಾಡಿದ್ದರು. ಫೈನಲ್ ಪಂದ್ಯದಲ್ಲಿ ಆರ್ಸಿಬಿ ಎದುರಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಡೆಕ್ಕನ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 143 ರನ್ ಬಾರಿಸಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ 9 ವಿಕೆಟ್ಗೆ ಕೇವಲ 137 ರನ್ ಮಾತ್ರ ಗಳಿಸಲಷ್ಟೇ ಶಕ್ತವಾಗಿ 6 ರನ್ ಅಂತರದಿಂದ ಸೋಲು ಕಂಡಿತ್ತು.
ಚೆನ್ನೈ ಸೂಪರ್ ಕಿಂಗ್ಸ್(2010)
ಮೊದಲ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮೂರನೇ ಪ್ರಯತ್ನದಲ್ಲಿ ಕಪ್ ಗೆಲ್ಲುವಲ್ಲಿ ಯಶಸ್ಸು ಕಂಡಿತ್ತು. ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಚೆನ್ನೈ 5 ವಿಕೆಟ್ಗೆ 168 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಸಚಿನ್ ತೆಂಡೂಲ್ಕರ್ ನಾಯಕತ್ವದ ಮುಂಬೈ ಇಂಡಿಯನ್ಸ್ 9 ವಿಕೆಟ್ಗೆ 146 ರನ್ ಗಳಿಸಿ 22 ರನ್ ಅಂತರದ ಸೋಲು ಕಂಡಿತು. 48 ರನ್ ಬಾರಿಸಿದ ಸಚಿನ್ ಅವರದ್ದೇ ಮುಂಬೈ ಪರ ಅತ್ಯಧಿಕ ಗಳಿಕೆಯಾಗಿತ್ತು.
ಚೆನ್ನೈ ಸೂಪರ್ ಸಿಂಗ್ಸ್(2011)
ಹಾಲಿ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮರು ವರ್ಷ ನಡೆದಿದ್ದ ಐಪಿಎಲ್ನಲ್ಲಿಯೂ ಫೈನಲ್ ಪ್ರವೇಶಿಸಿತ್ತು. ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಇದು ಆರ್ಸಿಬಿಯ ಎರಡನೇ ಫೈನಲ್ ಪಂದ್ಯವಾಗಿತ್ತು. ಆರ್ಸಿ ತಂಡ ಕೂಡ ಬಲಿಷ್ಠವಾಗಿತ್ತು. ಚೊಚ್ಚಲ ಕಪ್ ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಿದ್ದ ಆರ್ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿತ್ತು. ಫೈನಲ್ನಲ್ಲಿ 58 ರನ್ ಸೋಲಿಗೆ ತುತ್ತಾಗಿತ್ತು. ಚೆನ್ನೈ ಸತತ 2ನೇ ಟ್ರೋಫಿಗೆ ಮುತ್ತಿಕ್ಕಿತ್ತು.
ಇದನ್ನೂ ಓದಿ IPL 2024 : ಐಪಿಎಲ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಬೌಲರ್ಗಳ ವಿವರ ಇಲ್ಲಿದೆ
ಕೋಲ್ಕತ್ತಾ ನೈಟ್ ರೈಡರ್ಸ್(2012)
ಹ್ಯಾಟ್ರಿಕ್ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಗೌತಮ್ ಗಂಭಿರ್ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಅಡ್ಡಗಾಲಿಕ್ಕಿತ್ತು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, ಸುರೇಶ್ ರೈನಾ ಮತ್ತು ಮೈಕಲ್ ಹಸ್ಸಿ ಅವರ ಅರ್ಧಶತಕದ ಬ್ಯಾಟಿಂಗ್ ಬಲದಿಂದ 3 ವಿಕೆಟ್ಗೆ 190 ರನ್ ಬಾರಿಸಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನತ್ತಿದ ಕೆಕೆಆರ್ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಬಾರಿಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಿತು.
ಮುಂಬೈ ಇಂಡಿಯನ್ಸ್ (2013)
2010ರ ಐಪಿಎಲ್ ಫೈನಲ್ಲಿಷ್ಟ್ಗಳಾಗಿದ್ದ ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್(Mumbai Indians) ಮತ್ತೆ ಮೂರು ವರ್ಷಗಳ ಬಳಿಕ ಫೈನಲ್ ಮುಖಾಮುಖಿಯಾಯಿತು. ರೋಹಿತ್ ಶರ್ಮ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಆಡಿದ ಮೊದಲ ಫೈನಲ್ ಕೂಡ ಇದಾಗಿತ್ತು. 2010 ಸೋಲಿನ ಸೇಡನ್ನು ಮುಂಬೈ ಇಲ್ಲಿ ತೀರಿಸಿಕೊಂಡಿತು. ಫೈನಲ್ನಲ್ಲಿ ಮುಂಬೈ 23 ರನ್ ಅಂತರದಿಂದ ಧೋನಿ ಪಡೆಯನ್ನು ಮಗುಚಿ ಹಾಕಿತ್ತು. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ವಿದಾಯದ ಐಪಿಎಲ್ ಟೂರ್ನಿ ಕೂಡ ಇದಾಗಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್(2014)
ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮತ್ತು ಗಂಭೀರ್ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಪಂಜಾಬ್ ಪರ ಲೀಗ್ ಪಂದ್ಯಗಳಲ್ಲಿ ಅಸಾಮಾನ್ಯ ಬ್ಯಾಟಿಂಗ್ ನಡೆಸಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಅವರು ಈ ಪಂದ್ಯದ ಪ್ರಮುಖ ಹೈಲೆಟ್ಸ್ ಆಗಿದ್ದರು. ಆದರೆ ಫೈನಲ್ನಲ್ಲಿ ಅವರ ಆಡ ನಡೆಯಲಿಲ್ಲ. ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದ್ದರು. ಆದರೆ ವೃದ್ಧಿಮಾನ್ ಸಾಹಾ ಅವರು ಅಜೇಯ 115 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಪಂಜಾಬ್ 4 ವಿಕೆಟ್ಗೆ 199 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ನಾಟಕೀಯ ಕುಸಿತ ಕಂಡು ಇನ್ನೇನು ಸೋಲಲಿದೆ ಎನ್ನುವಾಗ 8ನೇ ಕ್ರಮಾಂಕದಲ್ಲಿ ಆಡಲಿಳಿದ ಸ್ಪಿನ್ನ್ ಬೌಲರ್ ಪಿಯೂಷ್ ಚಾವ್ಲಾ ಅವರು ಅಜೇಯ 13 ರನ್ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಕೆಕೆಆರ್ 2ನೇ ಟ್ರೋಫಿ ಎತ್ತಿ ಹಿಡಿಯಿತು.
ಮುಂಬೈ ಇಂಡಿಯನ್ಸ್ (2015)
2015ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಫೈನಲ್ನಲ್ಲಿ ಕಣಕ್ಕಿಳಿಯಿತು. ಇದು ಉಭಯ ತಂಡಗಳ ಮೂರನೇ ಫೈನಲ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಮತ್ತು ಲಿಂಡೆಲ್ ಸಿಮಾನ್ಸ್ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ಗೆ 202 ರನ್ ಬಾರಿಸಿತು. ದೊಡ್ಡ ಮೊತ್ತ ಕಂಡು ಕಂಗಾಲಾದ ಚೆನ್ನೈ 8 ವಿಕೆಟ್ಗೆ 161 ರನ್ ಬಾರಿಸಿ ಸೋಲು ಕಂಡಿತು.
ಸನ್ರೈಸರ್ಸ್ ಹೈದರಾಬಾದ್(2016)
ಆರ್ಸಿಬಿ ಅಭಿಮಾನಿಗಳಿಗೆ ಮೂರನೇ ಬಾರಿಗೆ ನಿರಾಸೆಯಾದ ಐಪಿಎಲ್ ಆವೃತ್ತಿ ಇದಾಗಿತ್ತು. ಬಲಿಷ್ಠ ಆಟಗಾರ ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್, ಶೇನ್ ವಾಟ್ಸನ್ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಕೂಡ ಕಪ್ ಗೆಲ್ಲುವಲ್ಲಿ ಆರ್ಸಿಬಿ ವಿಫಲವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) 7 ವಿಕೆಟ್ಗೆ 208 ರನ್ ಬಾರಿಸಿತು. ದಿಟ್ಟವಾಗಿ ಗುರಿ ಬೆನ್ನಟ್ಟಿಕೊಂಡು ಹೋದ ಆರ್ಸಿಬಿ ಮೊದಲ ವಿಕೆಟ್ಗೆ 114 ರನ್ ಒಟ್ಟುಗೂಡಿಸಿತು. ಈ ವೇಳೆ ಆರ್ಸಿಬಿ ಅಭಿಮಾನಿಗಳೆಲ್ಲ ಈ ಸಲ ಕಪ್ ನಮ್ದೇ ಎಂದು ನಂಬಿದ್ದರು. ಆದರೆ, ನಂಬುಗೆಯ ಬ್ಯಾಟರ್ಗಳೆಲ್ಲ ಸತತವಾಗಿ ವಿಕೆಟ್ ಒಪ್ಪಿಸಿ ತಂಡದ ಸೋಲಿಗೆ ಕಾರಣವಾದರು. ಭರ್ತಿ 200 ರನ್ ಗಳಿಸಿ 8 ರನ್ ಅಂತರದ ಸೋಲು ಕಂಡಿತು.
ಮುಂಬೈ ಇಂಡಿಯನ್ಸ್ (2017)
ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವರ್ಷಗಳ ಕಾಲ ಬ್ಯಾನ್ ಆದ ಕಾರಣ ಪರ್ಯಾಯವಾಗಿ ಹುಟ್ಟಿಕೊಂಡ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಅತ್ಯಂತ ರೋಚಕವಾಗಿ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಮುಂಬೈ ಕೇವಲ ಒಂದು ರನ್ ಅಂತರದಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತ್ತು.
ಚೆನ್ನೈ ಸೂಪರ್ ಕಿಂಗ್ಸ್ (2018)
2 ವರ್ಷಗಳ ಬ್ಯಾನ್ ಶಿಕ್ಷೆ ಪೂರೈಸಿ ಮುಗಿಸಿ ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈ ಕಪ್ ಗೆದ್ದು ಗ್ರೇಟ್ ಕಮ್ಬ್ಯಾಕ್ ಮಾಡಿತ್ತು. ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿತು. ಚೆನ್ನೈ ಪರ ಶೇನ್ ವಾಟ್ಸನ್ ಅಜೇಯ 117 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮುಂಬೈ ಇಂಡಿಯನ್ಸ್(2019)
2019ರ ಐಪಿಎಲ್ ಫೈನಲ್ ಪಂದ್ಯ ಕೂಡ ಅತ್ಯಂತ ರೋಚಕ ಫೈನಲ್ನಲ್ಲಿ ಒಂದಾಗಿದೆ. ಚೆನ್ನೈ ತಂಡ ಅಂತಿಮ ಒಂದು ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಮುಂಬೈ ತಂಡದ ಲಸಿತ್ ಮಾಲಿಂಗ ಅವರು ಶಾರ್ದೂಲ್ ಠಾಕೂರ್ ಅವರನ್ನು ಎಲ್ಬಿಡಬ್ಲ್ಯು ಮಾಡಿ ತಂಡಕ್ಕೆ ರೋಚಕ 1 ರನ್ ಅಂತರದ ಗೆಲುವು ತಂದುಕೊಟ್ಟಿದ್ದರು.
ಮುಂಬೈ ಇಂಡಿಯನ್ಸ್ (2020)
ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ತಂಡ ಫೈನಲ್ನಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಯುವ ಆಟಗಾರರನ್ನೇ ನೆಚ್ಚಿಕೊಂಡಿದ್ದ ಡೆಲ್ಲಿ ತಂಡ ಕಪ್ ಗೆಲ್ಲಬಹುದು ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಫೈನಲ್ನಲ್ಲಿ ಡೆಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ನಡೆಸಿ 5 ವಿಕೆಟ್ ಸೋಲಿಗೆ ತುತ್ತಾಗಿತ್ತು.
ಚೆನ್ನೈ ಸೂಪರ್ ಕಿಂಗ್ಸ್ (2021)
ಹಿರಿಯ ಆಟಗಾರರನ್ನು ನೆಚ್ಚಿಕೊಂಡಿದ್ದ, ಡ್ಯಾಡ್ಸ್ ಟೀಮ್ ಎಂದು ಕರೆಯಲ್ಪಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27 ರನ್ಗಳಿಂದ ಗೆದ್ದು ತಮ್ಮನ್ನು ಗೇಲಿ ಮಾಡಿದ ತಂಡಗಳಿಗೆ ಮುಟ್ಟಿ ನೋಡುವಂತಹ ಹೊಡೆತ ನೀಡಿತ್ತು. ಧೋನಿ 4ನೇ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿದರು.
ಗುಜರಾತ್ ಟೈಟಾನ್ಸ್ (2022)
ಐಪಿಎಲ್ಗೆ ಚೊಚ್ಚಲ ಬಾರಿ ಪ್ರವೇಶಿಸಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್(Gujarat Titans) ತನ್ನ ಮೊದಲ ಪ್ರಯತ್ನದಲ್ಲೇ ಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಫೈನಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಗುಜರಾತ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಚೆನ್ನೈ ಸೂಪರ್ ಕಿಂಗ್ಸ್(2023)
ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ ಮತ್ತು ಹೆಚ್ಚಾಗಿ ಅನಾನುಭವಿಗಳನ್ನು ನೆಚ್ಚಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ನಲ್ಲಿ ಮುಖಾಮುಖಿಯಾಗಿತು. ಅಂತಿಮ 2 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 10 ರನ್ ಬೇಕಿದ್ದಾಗ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಜಡೇಜಾ ಚೆನ್ನೈಗೆ ಗೆಲುವು ತಂದು ಕೊಟ್ಟರು. ಗೆಲುವು ತಂದು ಕೊಟ್ಟ ಜಡೇಜಾ ಅವರನ್ನು ಧೋನಿ ಹೆಗಲ ಮೇಲೆ ಎತ್ತಿಕೊಂಡು ಕಣ್ಣೀರು ಸುರಿಸಿದ್ದರು. ಈ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.