Site icon Vistara News

IPL 2024: ಸೋಲಿನ ಬೆನ್ನಲ್ಲೇ ಡೆಲ್ಲಿಗೆ ಮತ್ತೊಂದು ಶಾಕ್; ಗಾಯಾಳು ​ಇಶಾಂತ್ ಮುಂದಿನ ಪಂದ್ಯಗಳಿಗೆ ಅನುಮಾನ!

Ishant Sharma suffers injury

ಚಂಡೀಗಢ: ಐಪಿಎಲ್​ನ(IPL 2024) ಆರಂಭಿಕ ಪಂದ್ಯದಲ್ಲೇ ಸೋಲಿಗೆ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಸೋಲನ್ನು ಅರಗಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತಕ್ಕೆ ಸಿಲುಕಿದೆ. ಪಂದ್ಯದಲ್ಲಿ ಗಾಯಗೊಂಡ ವೇಗಿ ಇಶಾಂತ್​ ಶರ್ಮ(Ishant Sharma) ಅವರು ಮುಂದಿನ ಹಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಇದು ಡೆಲ್ಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.​

ಇಲ್ಲಿನ ಮುಲ್ನಾಪುರದಲ್ಲಿ ನೂತನವಾಗಿ ನಿರ್ಮಿಸಲಾದ ಮಹಾರಾಜ ಯಾದವೀಂದ್ರ ಸಿಂಗ್‌ ಇಂಟರ್‌ನ್ಯಾಶನಲ್‌ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಪಂಜಾಬ್‌ ಕಿಂಗ್ಸ್‌ 4 ವಿಕೆಟ್​ಗಳ ಜಯ ಸಾಧಿಸಿದೆ. ಇದೇ ಪಂದ್ಯದಲ್ಲಿ ಫೀಲ್ಡಿಂಗ್ ​ಮಾಡುವಾಗ ಡೆಲ್ಲಿ ಕ್ಯಾಪಿಟಲ್ಸ್​ ವೇಗಿ ಇಶಾಂತ್ ಶರ್ಮ ಪಾದದ ಉಳುಕಿನ ಗಾಯಕ್ಕೆ ತುತ್ತಾದರು. ತಕ್ಷಣವೇ ನೆಲಕ್ಕೆ ಕುಸಿದ ಇಶಾಂತ್ ಶರ್ಮಾರನ್ನು ಸಹ ಆಟಗಾರ ಮತ್ತು ಫಿಸಿಯೊ ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು.

ಮಿಚೆಲ್​ ಮಾರ್ಷ್​ ಓವರ್​ನಲ್ಲಿ ಪ್ರಭಾಸಿಮ್ರಾನ್ ಹೊಡೆದ ಚೆಂಡನ್ನು ಬೌಂಡರಿ ಲೈನ್​ನಲ್ಲಿ ತೆಡೆಯುವ ಯತ್ನದಲ್ಲಿ ಇಶಾಂತ್​ ಶರ್ಮ ಅವರ ಪಾದ ಉಳುಕಿತು. ನೋವಿನಿಂದ ನರಳಿದ ಅವರನ್ನು ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹತ್ ಡ್ರೆಸ್ಸಿಂಗ್​ ರೂಮ್​ಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಆದರೆ ಅವರ ಗಾಯ ಕೊಂಚ ಗಂಭೀರವಾಗಿದ್ದು ಮುಂದಿನ ಕೆಲ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ IPL 2024 : ಸಂಜು ಬಳಗದ ಸವಾಲು ಮೀರುವುದೇ ರಾಹುಲ್ ಪಡೆ?

ಮೈದಾನದಿಂದ ಹೊರಹೋಗುವಾಗ ಇಶಾಂತ್​ಗೆ ನಡೆಯಲು ಕೂಡ ಸಾಧ್ಯವಾಗಿರಲಿಲ್ಲ. ಕುಂಟುತ್ತಲೇ ಸಾಗಿದರು. ಪಂದ್ಯದಲ್ಲಿ 2 ಓವರ್​ ನಡೆಸಿದ ಅವರು 16 ರನ್​ ನೀಡಿ 1 ವಿಕೆಟ್​ ಕೂಡ ಪಡೆದಿದ್ದರು. ಪೂರ್ತಿಯಾಗಿ ಪಂದ್ಯ ಆಡುತ್ತಿದ್ದರೆ ಡೆಲ್ಲಿ ಗೆಲ್ಲುವ ಸಾಧ್ಯತೆಯೂ ಇರುತ್ತಿತ್ತು. ಇಶಾಂತ್​ ಗಾಯ ಡೆಲ್ಲಿಗೆ ಎಲ್ಲಿಲ್ಲದ ಚಿಂತೆ ಉಂಡುಮಾಡಿದೆ. ತಂಡದಲ್ಲಿದ್ದ ಏಕೈಕ ಅನುಭವಿ ಬೌಲರ್​ ಅವರಾಗಿದ್ದರು.

ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಇಂಪ್ಯಾಕ್ಟ್​ ಪ್ಲೇಯರ್​ ಅಭಿಷೇಕ್ ಪೊರೆಲ್ ಅವರ ವಿಸ್ಫೋಟಕ ಬ್ಯಾಟಿಂಗ್​ ನೆರವಿನಿಂದ 9 ವಿಕೆಟ್​ಗೆ 174 ರನ್​ ಬಾರಿಸಿತು. ಜಬಾಬಿತ್ತ ಪಂಜಾಬ್​ ಕಿಂಗ್ಸ್​(Punjab Kings) ಸ್ಯಾಮ್​ ಕರನ್ ಅವರ ಅರ್ಧಶತಕದ ಹೋರಾಟದಿಂದ 19.2 ಓವರ್​ನಲ್ಲಿ 6 ವಿಕೆಟ್​ಗೆ 177 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

Exit mobile version