ಬೆಂಗಳೂರು: ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ಜಿಟಿ) ವರದಿ ಕೇಳಿತ್ತು. ಇದೀಗ ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ, ಹೀಗಾಗಿ ಬೆಂಗಳೂರಿನನಲ್ಲಿ ನಡೆಯುವ ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿ ಬಂದಿತ್ತು. ಈ ವೇಳೆ ಕೆಎಸ್ಸಿಎ ಆಡಳಿತ ಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್ಟಿಪಿ)ದ ನೀರು ಬಳಕೆ ಮಾಡುಲಾಗುತ್ತದೆ ಎಂದು ಹೇಳಿ ಪಂದ್ಯವಾವಳಿಯನ್ನು ನಡೆಸಿತ್ತು.
ಇದನ್ನೂ ಓದಿ IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್
ಈ ವೇಳೆ ಸ್ಪಷ್ಟನೆ ನೀಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್, ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಯೋಗ್ಯವಾದ ನೀರನ್ನು ಬಳಸುವುದಿಲ್ಲ. ನೀರಿನ ಮೌಲ್ಯ ಏನೆಂಬುವುದು ನಮಗೆ ತಿಳಿದಿದೆ. ಎಸ್ಟಿಪಿ ಘಟಕದ ನೀರನ್ನು ನಾವು ಬಳಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಆದೇಶಿಸಿ ಮೇ 2ಕ್ಕೆ ಎರಡನೇ ಹಂತದ ವಿಚಾರಣೆಯನ್ನು ನಿಗದಿಪಡಿಸಿತ್ತು.
ಇದೀಗ ವಿಚಾರಣೆ ನಡೆದಿದ್ದು, ಎನ್ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್ವೆಲ್, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 13ಕ್ಕೆ ನಿಗದಿಪಡಿಸಿದೆ. ಮುಂದಿನ ವಿಚಾರಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದು ಈ ವೇಳೆಗಾಗಲೇ ಐಪಿಎಲ್ ಪಂದ್ಯ ಕೂಡ ಮುಕ್ತಾಯ ಕಂಡಿರುತ್ತದೆ. ಹೀಗಾಗಿ ಈ ಬಾರಿಯ ಆರ್ಸಿಬಿ ಪಂದ್ಯಗಳಿಗೆ ಯಾವುದೇ ಅಡ್ಡಿ ಉಂಟಾಗದು. ಚಿನ್ನಸ್ವಾಮಿಯಲ್ಲಿ ಇನ್ನು ಕೇವಲ 2 ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ಒಂದು ಒಂದ್ಯ ಇಂದು(ಶನಿವಾರ) ನಡೆಯಲಿದೆ.