Site icon Vistara News

IPL 2024: ಭಾರತದಲ್ಲೇ ನಡೆಯಲಿದೆ ಐಪಿಎಲ್​; ಇದೇ ದಿನಾಂಕ ಫೈನಲ್​!

IPL Auction 2024

ಮುಂಬಯಿ: ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024)ರ ಆಟಗಾರರ ಮಿನಿ ಹರಾಜು(IPL Auction 2024) ಡಿಸೆಂಬರ್ 19 ರಂದು ದುಬೈನಲ್ಲಿ ನಡೆದಿತ್ತು. ಆದರೆ ಟೂರ್ನಿ ಯಾವಾಗ ಆರಂಭವಾಗಲಿದೆ ಎನ್ನುವುದು ಕ್ರಿಕೆಟ್​ ಅಭಿಮಾನಗಳ ಚಿಂತೆಯಾಗಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಂತಿದೆ. ಟೂರ್ನಿ ಮಾರ್ಚ್​ 22ರಿಂದ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಎಎನ್​ಐ ವರದಿ ಮಾಡಿದೆ. ಆದರೆ, ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಪ್ರತಿ ವರ್ಷ ಐಪಿಎಲ್​ ಆರಂಭವಾಗುವುದು ಮಾರ್ಚ್​ ಅಂತಿಮ ವಾರದಲ್ಲಿ. ಮೇ ತನಕ ಪಂದ್ಯಾವಳಿಗಳು ಸಾಗುತ್ತದೆ. ಆದರೆ ಈ ಬಾರಿ 2024 ಲೋಕಸಭಾ ಚುನಾವಣೆ ಇದೇ ಸಮಯದಲ್ಲಿ ಇರುವುದರಿಂದ ಟೂರ್ನಿಯನ್ನು ಭಾರತದಲ್ಲಿ ನಡೆಸುವುದು ಕಷ್ಟ. ಹೀಗಾಗಿ ಐಪಿಎಲ್​ ಅಭಿಮಾನಿಗಳಿಗೆ ಟೂರ್ನಿ ಆರಂಭದ ಬಗ್ಗೆ ಹಲವು ಗೊಂದಲ ಕಾಡಿತ್ತು. ಇದೀಗ ಬಂದ ವರದಿಯ ಪ್ರಕಾರ ಮಾರ್ಚ್ 22ಕ್ಕೆ ಐಪಿಎಲ್ ಪ್ರಾರಂಭವಾಗುವ ಸಾಧ್ಯತೆ ಇದೆ ತಿಳಿದುಬಂದಿದೆ.

ಬಿಸಿಸಿಐ ಮೂಲಗಳ ಪ್ರಕಾರ ದೇಶದಲ್ಲಿ ಚುನಾವಣೆ ನಡೆದರೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತದಲ್ಲಿ ನಡೆಯಲಿದೆ ಎಂದು ತಿಳಿಸಿರುವುದಾಗಿ ಎಎನ್​ಐ ತನ್ನ ವರದಿಯಲ್ಲಿ ತಿಳಿಸಿದೆ. “ಪಂದ್ಯಾವಳಿಯನ್ನು ದೇಶದ ಹೊರಗೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಸಾರ್ವತ್ರಿಕ ಚುನಾವಣೆ ಇದೇ ಸಮಯದಲ್ಲಿ ನಡೆಯಲಿದೆ. ಒಂದೊಮ್ಮೆ ಕೆಲ ರಾಜ್ಯ ಪಂದ್ಯವನ್ನು ಆಯೋಜಿಸಲು ಬಯಸದಿದ್ದರೆ, ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಬಿಸಿಸಿಐ ಮೂಲವೊಂದು ಎಎನ್‌ಐಗೆ ತಿಳಿಸಿದೆ.

2 ಬಾರಿ ಚುನಾವಣ ಕಾರಣದಿಂದ ವಿದೇಶದಲ್ಲಿ ನಡೆದಿತ್ತು ಐಪಿಎಲ್​


2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಆದರೆ ಈ ಬಾರಿ ಬಿಸಿಸಿಐ ಸಂಪೂರ್ಣವಾಗಿ ಟೂರ್ನಿಯನ್ನು ವಿದೇಶದಲ್ಲಿ ನಡೆಸುವುದು ಕಷ್ಟ ಸಾಧ್ಯ. ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಪಂದ್ಯಗಳನ್ನು ವಿದೇಶದಲ್ಲಿ ನಡೆಸ ಬೇಕೇ ಅಥವಾ ದೇಶದಲ್ಲಿ ನಡೆಸಬೇಕೆ ಎನ್ನುವುದು ಅಧಿಕೃತಗೊಳ್ಳಲಿದೆ. ಎಲ್ಲವೂ ಚುನಾವಣ ಸಮಿತಿಯ ನಿರ್ಧಾರದ ಮೇಲೆ ಅವಲಂಬಿತ.

ಇದನ್ನೂ ಓದಿ IPL Betting : ಐಪಿಎಲ್​ ಬೆಟ್ಟಿಂಗ್​ ಕೇಸ್​​ ತನಿಖೆ ಕೈಬಿಟ್ಟ ಸಿಬಿಐ!

ಎಷ್ಟು ಆಟಗಾರರ ಹರಾಜು?

30 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 72 ಆಟಗಾರರನ್ನು ಒಟ್ಟು 230.45 ಕೋಟಿ ರೂ.ಗೆ 10 ಫ್ರಾಂಚೈಸಿಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕಂಡವು.

ಈ ಬಾರಿಯ ವಿಶೇಷತೆ ಏನು?

ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಇಬ್ಬರು ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ 20 ಕೋಟಿ ರೂ.ಗಳ ಗಡಿ ದಾಟಿದ್ದಾರೆ. ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿತು, ಈ ದಾಖಲೆಯು ಕೇವಲ 30 ನಿಮಿಷಗಳ ಕಾಲ ಉಳಿಯಿತು, ಕೋಲ್ಕತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್​ಗೆ 24.75 ಕೋಟಿ ರೂ.ಗಳನ್ನು ಪಾವತಿಸಿತು. ಇದೇ ವೇಳೆ ಅನ್​ಕ್ಯಾಪ್ಡ್​ ಭಾರತೀಯರಾದ ಶುಭಂ ದುಬೆ ಮತ್ತು ಸಮೀರ್ ರಿಜ್ವಿ ಕೂಡ ಗಮನ ಸೆಳೆದರು.

Exit mobile version