ಬೆಂಗಳೂರು: ಈ ಬಾರಿಯ ಐಪಿಎಲ್(IPL 2024) ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರ ಪೈಕಿ 14 ಮಂದಿ ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದರು. ಆದರೆ ಮಾರಾಟವಾದದ್ದು ಕೇವಲ ಇಬ್ಬರು ಮಾತ್ರ. ಅನ್ಸೋಲ್ಡ್ ಮತ್ತು ಸೋಲ್ಡ್ ಆದ ಆಟಗಾರರು ಯಾರೆಂಬ ಮಾಹಿತಿ ಇಂತಿದೆ.
ಸೋಲ್ಡ್ ಆದ ಆಟಗಾರರು
ಮನೀಶ್ ಪಾಂಡೆ
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮನೀಶ್ ಪಾಂಡೆ 50 ಲಕ್ಷ ಮೂಲಬೆಲೆ ಹೊಂದಿದ್ದರು. ಆರಂಭಿಕ ಹಂತದ ಹರಾಜಿನಲ್ಲಿ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ದ್ವಿತೀಯ ಸುತ್ತಿನಲ್ಲಿ ಅವರನ್ನು ಮೂಲಬೆಲೆಗೆ 2 ಬಾರಿಯ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಖರೀದಿಸಿತು. ಆರ್ಸಿಬಿ ತಂಡ ಇವರನ್ನು ಖರೀದಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಆರ್ಸಿಬಿ ಖರೀಸಲಿಲ್ಲ. ಅಲ್ಲದೆ ಈ ಬಾರಿಯೂ ಕರ್ನಾಟಕದ ಆಟಗಾರರಿಗೆ ಆರ್ಸಿಬಿ ಮಣೆ ಹಾಕಿಲ್ಲ. 170 ಐಪಿಎಲ್ ಆಡಿರುವ ಪಾಂಡೆ 3808 ರನ್ ಬಾರಿಸಿದ್ದಾರೆ. 1 ಶತಕ ಮತ್ತು 22 ಅರ್ಧಶತಕ ಬಾರಿಸಿದ್ದಾರೆ. 114 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
ಶ್ರೇಯಸ್ ಗೋಪಾಲ್
20 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಪಿನ್ನ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ. ಇವರು ಕೂಡ ದ್ವಿತೀಯ ಸುತ್ತಿನಲ್ಲಿ ಸೇಲ್ ಆದರು. 30 ವರ್ಷದ ಶ್ರೇಯಸ್ ಗೋಪಾಲ್ ಇದುವರೆಗೆ 49 ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 49 ವಿಕಟ್ ಕೂಡ ಪಡೆದಿದ್ದಾರೆ. 16 ರನ್ಗೆ 4 ವಿಕೆಟ್ ಕಿತ್ತಿರುವುದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಹರಾಜಾಗದ ಆಟಗಾರರು
ಕರುಣ್ ನಾಯರ್
ಜಗದೀಶ್ ಸುಚಿತ್
ಶುಭಾಂಗ್ ಹೆಗ್ಡೆ
ನಿಹಾಲ್ ಉಲ್ಲಾಳ್
ಬಿ ಆರ್ ಶರತ್
ಮನ್ವಂತ್ ಕುಮಾರ್
ಎಲ್ ಆರ್ ಚೇತನ್
ಕೆ ಎಲ್ ಶ್ರೀಜಿತ್
ಎಂ. ವೆಂಕಟೇಶ್
ಮೋನಿಶ್ ರೆಡ್ಡಿ
ಅಭಿಲಾಷ್ ಶೆಟ್ಟಿ
ಕೆ.ಸಿ ಕಾರ್ಯಪ್ಪ
ಇದನ್ನೂ ಓದಿ IPL 2024: 8.4 ಕೋಟಿಗೆ ಚೆನ್ನೈ ಸೇರಿದ ಸಮೀರ್ ರಿಜ್ವಿ ಯಾರು?, ಈತನ ಹಿನ್ನೆಲೆ ಏನು?
ಮೊತ್ತೊಂದು ಅವಕಾಶವಿದೆ!
ಅನ್ಸೋಲ್ಡ್ ಆದ ಆಟಗಾರರಿಗೆ ಇನ್ನು ಕೂಡ ಐಪಿಎಲ್ ತಂಡ ಸೇರುವ ಅವಕಾಶವಿದೆ. ಇದು ಹೇಗೆ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಐಪಿಎಲ್ ತಂಡ ಸೇರಿದ ಯಾವುದೇ ಆಟಗಾರ ಗಾಯಗೊಂಡು ಅಥವಾ ಇತರ ಕಾರಣಗಳಿಂದ ಟೂರ್ನಿಗೆ ಅಲಭ್ಯರಾದರೆ ಆಗ ಅನ್ಸೋಲ್ಡ್ ಆದ ಆಟಗಾರರಿಗೆ ಅದೃಷ್ಟ ಖುಲಾಯಿಸಲಿದೆ.
ಇದಕ್ಕೆ ತಕ್ಕ ನಿದರ್ಶನವೆಂದರೆ, ಕಳೆದ ಬಾರಿಯ ಮಿನಿ ಹರಾಜಿನಲ್ಲಿ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾದ ಹಿರಿಯ ಆಟಗಾರ ಕೇದಾರ್ ಜಾಧವ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಅವರು ಅನ್ಸೋಲ್ಡ್ ಆಟಗಾರರ ಪಟ್ಟಿಯಲ್ಲಿದ್ದರು. ಆಡುವ ಅವಕಾಶ ಸಿಗದ ಕಾರಣ ಅವರು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಟೂರ್ನಿಯ ಕಾಮೆಂಟ್ರಿ ನಡೆಸುವು ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆರ್ಸಿಬಿಯ ಬೌಲರ್ ಡೇವಿಡ್ ವಿಲ್ಲಿ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು. ಇವರ ಸ್ಥಾನಕ್ಕೆ ಕೇದಾರ್ ಆಯ್ಕೆಯಾದರು. ಹೀಗಾಗಿ ಈ ಬಾರಿ ಅನ್ಸೋಲ್ಡ್ ಆದ ಆಟಗಾರರಿಗೆ ಇದೇ ರೀತಿಯ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಆದರ ಅದೃಷ್ಟ ನೆಟ್ಟಗಿರಬೇಕು.