Site icon Vistara News

IPL 2024: ಮಯಾಂಕ್​ ಯಾದವ್ ವಿಶ್ವಕಪ್‌ ಆಡುವ ಬಗ್ಗೆ 100 ಪ್ರತಿಶತ ನಂಬಿಕೆ ಇದೆ; ತಾಯಿ ವಿಶ್ವಾಸ

IPL 2024

ಲಕ್ನೋ: ಐಪಿಎಲ್​ನಲ್ಲಿ(IPL 2024) ಗಂಟೆಗೆ 150ಕ್ಕಿಂತ ಅಧಿಕ ವೇಗದಲ್ಲಿ ಬೌಲಿಂಗ್​ ನಡೆಸಿ ಭಾರೀ ಸಂಚಲನ ಮೂಡಿಸಿದ ಲಕ್ನೋ ಸೂಪರ್​ ಜೈಂಟ್ಸ್(LSG)​ ತಂಡದ ಯುವ ವೇಗಿ ಮಯಾಂಕ್​ ಯಾದವ್(Mayank Yadav)​ ಪ್ರದರ್ಶನದ ಬಗ್ಗೆ ಅವರ ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೇ ವರ್ಷ ನಡೆಯುವ ಟಿ20 ವಿಶ್ವಕಪ್( T20 WC)​ ತಂಡದಲ್ಲಿ ಸ್ಥಾನ ಪಡೆಯುವುದು ಶೇ. 100ಕ್ಕೆ 100 ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಜ್ ತಕ್‌ ಸಂದರ್ಶನದೊಂದಿಗೆ ಮಾತನಾಡಿದ ಮಯಾಂಕ್ ಅವರ ತಾಯಿ, ತನ್ನ ಮಗ ಭಾರತ ತಂಡಕ್ಕೆ ಪದಾರ್ಪಣೆ ಮಾಡುತ್ತಾನೆ ಎಂಬುದು ನನಗೆ 100 ಪ್ರತಿಶತ ಖಚಿತವಾಗಿದೆ. ತನಗಿಂತ ಹೆಚ್ಚಾಗಿ ಮಯಾಂಕ್​ ತಂದೆಯೇ ಮಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಲಿದ್ದಾರೆ ಎಂದು ಬಲವಾಗಿ ನಂಬಿದ್ದಾರೆ ಎಂದು ಹೇಳಿದ್ದಾರೆ.

“ನನಗೆ 100 ಪ್ರತಿಶತ ನಂಬಿಕೆ ಇದೆ. ನನ್ನ ಮಗ ಟೀಮ್​ ಇಂಡಿಯಾಕ್ಕೆ ಶೀಘ್ರದಲ್ಲೇ ಆಡಲಿದ್ದಾನೆ. ಕಳೆದ ವರ್ಷ ಗಾಯದಿಂದಾಗಿ ಐಪಿಎಲ್​ ಆಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಆಡಿದ 2 ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾನೆ. ಮಾಯಾಂಕ್‌ ಭಾರತದ ವಿಶ್ವಕಪ್‌ ತಂಡದಲ್ಲಿರಬೇಕು ಎಂಬುದು ಎಲ್ಲರ ಹಾರೈಕೆಯೂ ಆಗಿದೆ. ಮುಂದಿನ ಪಂದ್ಯದಲ್ಲಿಯೂ ಶ್ರೇಷ್ಠ ಆಟವಾಡಲಿ” ಎಂದು ತಾಯಿ ಮಗನಿಗೆ ಹಾರೈಸಿದರು.

ಇದನ್ನೂ ಓದಿ IPL 2024 : ಐಪಿಎಲ್​ ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಡಿಸ್ನಿ ಕೊಟ್ಟ ಲೆಕ್ಕಾಚಾರ ಹೀಗಿದೆ

ಮಾಯಾಂಕ್‌ ಯಾದವ್‌ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಬೌಲಿಂಗ್​ ಶ್ರೇಯಸ್ಸಿಗೆ ಇಶಾಂತ್‌ ಶರ್ಮ, ನವದೀಪ್‌ ಸೈನಿ ನೀಡಿದ ಸಲಹೆಯೂ ಕೂಡ ಕಾರಣ. ಈ ವಿಚಾರವನ್ನು ಸ್ವತಃ ಯಾದವ್ ಅವರೇ ಹೇಳಿಕೊಂಡಿದ್ದರು. ಬಡ ಕುಟುಂಬದಿಂದ ಬೆಳೆದು ಬಂದ ಪ್ರತಿಭೆ. ಯಾದವ್​ ಕ್ರಿಕೆಟ್​ ಆಡಲು ಆರಂಭಿಸಿದ್ದಾಗ ಅವರ ಬಳಿ ಹಾಕಿಕೊಳ್ಳಲು ಯೋಗ್ಯವಾದ ಶೂ ಕೂಡ ಇರಲಿಲ್ಲ. ಅವರ ತಂದೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದರು.

ಲಿಸ್ಟ್​ ‘ಎ’ಯಲ್ಲಿ 17 ಪಂದ್ಯಗಳನ್ನಾಡಿ 34 ವಿಕೆಟ್​ ಪಡೆದಿದ್ದಾರೆ. ದೇಶೀಯ ಟಿ20 ಟೂರ್ನಿಯಲ್ಲಿ 12 ಪಂದ್ಯ ಆಡಿ 18 ವಿಕೆಟ್​ ಕೆಡೆವಿದ್ದಾರೆ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 4 ಓವರ್​ ಎಸೆದು 14 ರನ್​ ನೀಡಿ 3 ವಿಕೆಟ್​ ವಿಕೆಟ್​ ಕಬಳಿಸಿದ್ದರು. ಮಯಾಂಕ್ ಪ್ರಸ್ತುತ ಐಪಿಎಲ್​ನಲ್ಲಿ ಅತ್ಯಂತ ವೇಗದ ಎಸೆತವನ್ನು ಎಸೆದು ಗಮನಸೆಳೆದಿದ್ದಾರೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 156.7 kmph ವೇಗದಲ್ಲಿ ಚೆಂಡೆಸಿದಿದ್ದರು. ಇದಕ್ಕೂ ಮುನ್ನ ನಡೆದಿದ್ದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 kmph ವೇಗದಲ್ಲಿ ಬೌಲಿಂಗ್​ ನಡೆಸಿದ್ದರು.

Exit mobile version