Site icon Vistara News

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

IPL 2024

ನವದೆಹಲಿ: ಗುಜರಾತ್​ ಟೈಟಾನ್ಸ್​( ತಂಡದ ಮಧ್ಯಮ ಕ್ರಮಾಂಕದ ವೇಗಿ ಮೋಹಿತ್​ ಶರ್ಮ(Mohit Sharma) ಅವರು ಐಪಿಎಲ್​ನಲ್ಲಿ(IPL 2024) ಅತಿ ಹೆಚ್ಚು ರನ್​ ಬಿಟ್ಟುಕೊಟ್ಟ ಆಟಗಾರ ಎಂಬ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಬಾಸಿಲ್ ಥಾಂಪಿ ದಾಖಲೆಯನ್ನು ಮುರಿದಿದ್ದಾರೆ.

​ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದ ಮೋಹಿತ್​ ಶರ್ಮ 4 ಓವರ್​ಗೆ ಬರೋಬ್ಬರಿ 73 ರನ್​ ಬಿಟ್ಟುಕೊಟ್ಟರು. ಈ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲೇ ಅತ್ಯಧಿಕ ರನ್​ ಬಿಟ್ಟುಕೊಟ್ಟ ಮೊದಲ ಬೌಲರ್​ ಎನ್ನುವ ಹಣೆಪಟ್ಟಿ ಕಟ್ಟಿಕೊಂಡರು. ಅಂತಿಮ ಓವರ್​ನಲ್ಲಿ ರಿಷಭ್​ ಪಂತ್​ ಅವರು 4 ಸಿಕ್ಸರ್​ ಮತ್ತು ಒಂದು ಬೌಂಡರಿ ಬಾರಿಸಿ ಒಟ್ಟು 31 ರನ್​ ಚಚ್ಚಿದರು.

ದುಬಾರಿ ರನ್​ ನೀಡಿದ ಆಟಗಾರರು


ಮೋಹಿತ್​ ಶರ್ಮ-73 ರನ್​. ಡೆಲ್ಲಿ ವಿರುದ್ಧ (2024)

ಬಾಸಿಲ್ ಥಾಂಪಿ-70 ರನ್​. ಆರ್​ಸಿಬಿ ವಿರುದ್ಧ (2018)

ಯಶ್​ ದಯಾಳ್​-69 ರನ್​. ಕೆಕೆಆರ್​ ವಿರುದ್ಧ (2023)

ರೀಸ್‌ ಟೋಪ್ಲೆ-68 ರನ್​. ಹೈದರಾಬಾದ್​ ವಿರುದ್ಧ (2024)

ಇದನ್ನೂ ಓದಿ IPL 2024 Points Table: ಡೆಲ್ಲಿ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ಗುಜರಾತ್​ಗೆ 4 ರನ್​ ವಿರೋಚಿತ ಸೋಲು


ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ಚೇಸಿಂಗ್​ ವೇಳೆ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು. ಅಂತಿಮ ಓವರ್​ನಲ್ಲಿ ಮೋಹಿತ್​ ಶರ್ಮ ಕನಿಷ್ಠ ಒಂದು ಬಾಲ್​ ಕಂಟ್ರೋಲ್​ ಮಾಡುತ್ತಿದ್ದರೂ ಕೂಡ ಗುಜರಾತ್​ ಗೆಲ್ಲುವು ಕಾಣುವ ಸಾಧ್ಯತೆ ಇತ್ತು.

Exit mobile version