Site icon Vistara News

IPL 2024: ಉದ್ಘಾಟನಾ ಪಂದ್ಯದಲ್ಲೇ ದಾಖಲೆ ಬರೆದ ಮಹೇಂದ್ರ ಸಿಂಗ್​ ಧೋನಿ

MS Dhoni

ಚೆನ್ನೈ: ನಿನ್ನೆ ನಡೆದ 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(CSK) ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇದೇ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಹೌದು, ಧೋನಿ ಅವರು ಮೊದಲ ಇನಿಂಗ್ಸ್​ನ ಅಂತಿಮ ಎಸೆತದಲ್ಲಿ ಆರ್​ಸಿಬಿ ಬ್ಯಾಟರ್​ ಅಜುನ್​ ರಾವತ್​ ಅವರನ್ನು ರನೌಟ್​ ಮಾಡುವ ಮೂಲಕ ಐಪಿಎಲ್​ ಟೂರ್ನಿಯಲ್ಲಿ ಅತ್ಯಧಿಕ ರನೌಟ್​(Run Out) ಮಾಡಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ತಂಡದವರೇ ಆಗಿರುವ ರವೀಂದ್ರ ಜಡೇಜಾ ಹೆಸರಿನಲ್ಲಿತ್ತು. ಜಡೇಜಾ 23 ಬಾರಿ ರನೌಟ್​ ಮಾಡಿದ್ದರು. ಇದೀಗ ಧೋನಿ 24 ಬಾರಿ ರನೌಟ್​ ಮಾಡಿ ಜಡೇಜಾ ಅವರನ್ನು ಹಿಂದಿಕ್ಕಿದ್ದಾರೆ.

ಟೂರ್ನಿಯ ಒಂದು ಪಂದ್ಯ ಮಾತ್ರ ಆಗಿರುವ ಕಾರಣ ಜಡೇಜಾಗೂ ಈ ದಾಖಲೆಯನ್ನು ಮುರಿಯುವ ಅವಕಾಶ ಇದೇ ಇದೆ. ಒಟ್ಟಾರೆ ಉಭಯ ಆಟಗಾರರ ಮಧ್ಯೆ ಈ ಬಾರಿ ರನೌಟ್​ ದಾಖಲೆಯ ತೀವ್ರ ಪೈಪೋಟಿ ಏರ್ಪಡಲಿದೆ. ಧೋನಿ ರನೌಟ್​ ಮಾತ್ರವಲ್ಲದೆ 2 ಅದ್ಭುತ ಕ್ಯಾಚ್​ ಕೂಡ ಪಡೆದು ಮಿಂಚಿದರು.

ಇದನ್ನೂ ಓದಿ IPL 2024 : ಮೈದಾನದಲ್ಲೇ ಜಗಳವಾಡಿದ ಕೊಹ್ಲಿ, ಜಡೇಜಾ; ಇಲ್ಲಿದೆ ವಿಡಿಯೊ

ಈ ಬಾರಿ ವಿದಾಯ


ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ಐಪಿಎಲ್​ಗೆ ವಿದಾಯ ಹೇಳಬೇಕಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ತಮ್ಮ ನಿವೃತ್ತಿಯನ್ನು ಒಂದು ವರ್ಷ ಮುಂದಕ್ಕೆ ಹಾಕಿದ್ದರು. ಕಳೆದ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿ ನೋವು ನಿವಾರಕ ಪ್ಲಾಸರ್​ಗಳನ್ನು ಧರಿಸಿ ಆಡಿದ್ದರು. ಟೂರ್ನಿ ಮುಗಿದ ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಮ್ಮ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಟೂರ್ನಿ ಧೋನಿಗೆ ವಿದಾಯದ ಟೂರ್ನಿಯಾಗಿದೆ.

ಆರ್​ಸಿಬಿಗೆ ಸೋಲು


ಶುಕ್ರವಾರ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 174 ರನ್ ಗಳ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಚೆನ್ನೈ 18.4 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಜಯ ಸಾಧಿಸಿತು. ಚೊಚ್ಚಲ ಐಪಿಎಲ್​ ಆಡಿದ ರಚಿನ್ ರವೀಂದ್ರ 15 ಎಸೆತಗಳಲ್ಲಿ 37 ರನ್ ಗಳಿಸಿ ಮಿಂಚಿದರು. ಶಿವಂ ದುಬೆ 34, ರವೀಂದ್ರ ಜಡೇಜ 25 ರನ್ ಗಳಿಸಿ ಔಟಾಗದೆ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

Exit mobile version