ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ವಿರುದ್ಧ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ಗೆಲುವು ಸಾಧಿಸಿದ ಪರಿಣಾಮ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) ಈ ಬಾರಿಯ ಐಪಿಎಲ್(IPL 2024) ಟೂರ್ನಿಯಿಂದ ಮೊದಲ ತಂಡವಾಗಿ ಹೊರಬಿದ್ದಿದೆ. 12 ಪಂದ್ಯ ಆಡಿ ಕೇವಲ 8 ಅಂಕ ಪಡೆದಿರುವ ಮುಂಬೈಗೆ ಇನ್ನೆರಡು ಪಂದ್ಯ ಬಾಕಿ ಉಳಿದಿದೆ. ಆದರೆ ಈ ಪಂದ್ಯಗಳನ್ನು ಗೆದ್ದರೂ ಹಾರ್ದಿಕ್ ಪಡೆಗೆ ಪ್ಲೇ ಆಫ್ ಅವಕಾಶವಿಲ್ಲ. ಹೀಗಾಗಿ ಮುಂಬೈಗೆ ಮುಂದಿನ ಪಂದ್ಯಗಳು ಕೇವಲ ಔಪಚಾರಿಕ ಪಂದ್ಯಗಳಾಗಿವೆ. ಮುಂಬೈ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೆಕೆಆರ್ ವಿರುದ್ಧ ಆಡಲಿದೆ.
ರೋಹಿತ್ ಶರ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೂ ಕೂಡ ಅವರನ್ನು ಈ ಬಾರಿ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಪಟ್ಟ ನೀಡಲಾಗಿತ್ತು. ಈ ವೇಳೆ ಮುಂಬೈ ಅಭಿಮಾನಿಗಳು ಫ್ರಾಂಚೈಸಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಟೂರ್ನಿಯಿಂದ ಮೊದಲ ತಂಡವಾಗಿ ಹೊರಬಿದ್ದಿರುವ ಕಾರಣ ತಂಡದ ಈ ಸ್ಥಿತಿಗೆ ಪಾಂಡ್ಯ ನೇರ ಕಾರಣ ಎಂದು ಕಿಡಿ ಕಾರಿದ್ದಾರೆ. ರೋಹಿತ್ ನಾಯಕನಾಗುತ್ತಿದ್ದರೆ ತಂಡಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ IPL 2024 Points Table: ಸನ್ರೈಸರ್ಸ್ಗೆ 10 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ
ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಯಾರೂ ಕೂಡ ತಂಡಕ್ಕಾಗಿ ಹಾಗೂ ಉತ್ಸಾಹ ಭರಿತವಾಗಿ ಆಡಲಿಲ್ಲ. ಕಳೆದ 16 ಆವೃತ್ತಿಯ ಐಪಿಎಲ್ ಟೂರ್ನಿಯನ್ನು ನೋಡುವುದಾದರೆ ಮುಂಬೈ ಈ ಸ್ಥಿತಿ ತಲುಪಿದ್ದು ಇದೇ ಮೊದಲು. ಯಾರು ಕೂಡ ಸಂಘಟಿತ ಪ್ರದರ್ಶನ ತೋರದೇ ಹೋದದ್ದು ತಂಡದ ಈ ಸ್ಥಿತಿಗೆ ಪ್ರಮುಖ ಕಾರಣ.
ಸದ್ಯ ಚೆನ್ನೈ, ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 12 ಅಂಕಗಳಿಸಿವೆ. ಹೀಗಾಗಿ ಈ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಬಹುತೇಕ ಪ್ಲೇ ಆಫ್ ಪ್ರವೇಶಿಸುವುದು ಖಚಿತ. ಹೈದರಾಬಾದ್ಗೆ ಇನ್ನೊಂದು ಪಂದ್ಯ ಗೆದ್ದರೂ ಸಾಕು. ಇಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಪ್ಲೇ ಆಫ್ ಕ್ಷೀಣ ಅವಕಾಶ ಹೊಂದಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಸೋತ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.