Site icon Vistara News

IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

rohit sharma

ಮುಂಬಯಿ: ಐದು ಬಾರಿಯ ಐಪಿಎಲ್‌(IPL 2024) ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌(Mumbai Indians) ತಂಡದ ಮಾಜಿ ನಾಯಕ ರೋಹಿತ್​ ಶರ್ಮ(Rohit Sharma) 17ನೇ ಆವೃತ್ತಿಯ ಐಪಿಎಲ್​ಗಾಗಿ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ನೆಟ್ಸ್​ನಲ್ಲಿ ರೋಹಿತ್​ ಅವರು ತಂಡದ ಜೆರ್ಸಿ ತೊಟ್ಟು ಬ್ಯಾಟಿಂಗ್​ ನಡೆಸುತ್ತಿರುವ ವಿಡಿಯೊವನ್ನು ಮುಂಬೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ರೋಹಿತ್​ ಶರ್ಮ ಅವರು ಡಿಫೆನ್ಸ್​ ಮತ್ತು ಸಿಕ್ಸರ್​ ಹೊಡೆತಗಳನ್ನು ಹೊಡೆಯುವ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಹಲವು ಎಮೊಜಿಗಳನ್ನು ಹಾಕಿ ಫ್ರಾಂಚೈಸಿಯು ಈ ವಿಡಿಯೊವನ್ನು ಹಂಚಿಕೊಂಡಿದೆ.

ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನಾಯಕತ್ವ ನೀಡಿದ ಕುರಿತು ಈಗಾಗಲೇ ಪರ-ವಿರೋಧಗಳ ಚರ್ಚೆ ನಡೆದಿದ್ದು, ರೋಹಿತ್​ ಅಭಿಮಾನಿಗಳು ಮಾತ್ರ ಹಾರ್ದಿಕ್​ ಪಾಂಡ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಅಲ್ಲದೆ ಮುಂಬೈ ತಂಡದ ಆಟಗಾರರು ಕೂಡ ಪರೋಕ್ಷವಾಗಿ ಪಾಂಡ್ಯ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಬಾರಿಯ ಟೂರ್ನಿಯ ವೇಳೆ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ.

2 ದಿನಗಳ ಹಿಂದಷ್ಟೇ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ರೋಹಿತ್‌ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಲು ಹಾರ್ದಿಕ್‌ ಪಾಂಡ್ಯ ಮತ್ತು ಮುಂಬೈ ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ ನಿರಾಕರಿಸಿದ್ದರು. ನಾಯಕತ್ವ ಬದಲಾವಣೆಗೆ ಸಂಬಂಧಿಸಿ ಕೇಳಲಾದ ಯಾವ ಪ್ರಶ್ನೆಗೂ ಪಾಂಡ್ಯ ಮತ್ತು ಬೌಷರ್‌ ಉತ್ತರಿಸದೆ ಮೌನಕ್ಕೆ ಶರಣಾಗಿದ್ದರು.

ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌(Mumbai Indians) ತಂಡ ಟ್ರೇಡಿಂಗ್​ ಮೂಲಕ ಖರೀದಿಸಿ ತಂಡದ ನಾಯಕನನ್ನಾಗಿ ನೇಮಿಸಿದಾಗಿನಿಂದ ರೋಹಿತ್​ ಶರ್ಮ(Rohit Sharma) ಅವರು ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ರೋಹಿತ್​ ತಂಡ ತೊರೆಯದೆ ಈ ಬಾರಿಯೂ ಮುಂಬೈ ಪರವೇ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಮುಂದಿನ ಆವೃತ್ತಿಯಲ್ಲಿ(IPL 2025) ಅವರು ಮುಂಬೈ ತೊರೆದು ಚೆನ್ನೈ ಸೂಪರ್​ ಕಿಂಗ್ಸ್​ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಇದನ್ನೂ ಓದಿ IPL 2024: ಆರ್​ಸಿಬಿ-ಚೆನ್ನೈ ಪಂದ್ಯದ ಟಿಕೆಟ್​ಗಾಗಿ ಸಹಾಯ ಕೋರಿದ ಸ್ಟಾರ್​ ಆಟಗಾರ ಅಶ್ವಿನ್

“ಭವಿಷ್ಯದಲ್ಲಿ ರೋಹಿತ್​ ಅವರು ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವುದನ್ನು ನೋಡಲು ಬಯಸುತ್ತೇನೆ. ಅವರು ಮುಂಬೈ ಇಂಡಿಯನ್ಸ್‌ಗಾಗಿ ಇಷ್ಟು ದಿನ ಆಡಿದ್ದಾರೆ. ಮುಂದಿನ ಆವೃತ್ತಿಯಿಂದ ಸಿಎಸ್​ಕೆಗಾಗಿ ಆಡಿದರೆ ಮತ್ತು ಅಲ್ಲಿಯೂ ಅವರ ನಾಯಕತ್ವದಲ್ಲಿ ತಂಡ ಗೆದ್ದರೆ ಒಳ್ಳೆಯದು. ಚೆನ್ನೈ ಪರ ಆಡಬೇಕೆ ಅಥವಾ ಆಡಬಾರದೇ ಎಂಬುವುದು ರೋಹಿತ್​ಗೆ ಬಿಟ್ಟ ನಿರ್ಧಾರ. ಅವರು ಆಡಬೇಕು ಎನ್ನುವುದು ನನ್ನ ಸಲಹೆ” ಎಂದು ಚೆನ್ನೈ ತಂಡದ ಮಾಜಿ ಆಟಗಾರ ರಾಯುಡು ಮನವಿ ಮಾಡಿದ್ದರು.

5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಈ ಬಾರಿ ಟೂರ್ನಿಯಲ್ಲಿ ಕಳೆದ ಬಾರಿಯ ರನ್ನರ್‌-ಅಪ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಮಾರ್ಚ್ 24ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ದ್ವಿತೀಯ ಪಂದ್ಯವನ್ನು ಮಾರ್ಚ್​ 27ರಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

Exit mobile version