ವಿಶಾಖಪಟ್ಟಣಂ: ಕೆಕೆಆರ್(KKR) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ 106 ರನ್ ಅಂತರದ ಸೋಲು ಕಂಡರೂ ಕೂಡ ಡೇವಿಡ್ ವಾರ್ನರ್(David Warner) ಅವರು ಸಿಕ್ಸರ್ ಮೂಲಕ ಐಪಿಎಲ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರನ್ನು ಹಿಂದಿಕ್ಕಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರು 1 ಸಿಕ್ಸರ್ ಬಾರಿಸುವ ಮೂಲಕ ಚೇಸಿಂಗ್ ವೇಳೆ ಐಪಿಎಲ್‌ನಲ್ಲಿ(IPL 2024) ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದರು. ಈ ಹಿಂದೆ 2ನೇ ಸ್ಥಾನಿಯಾಗಿದ್ದ ರೋಹಿತ್ ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನ ಪಡೆದರು. 156 ಸಿಕ್ಸರ್ ಬಾರಿಸಿರುವ ವಿಂಡೀಸ್ನ ಮಾಜಿ ಆಟಗಾರ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ವಾರ್ನರ್ 113 ಸಿಕ್ಸರ್, ರೋಹಿತ್ 112 ಸಿಕ್ಸರ್ ಬಾರಿಸಿದ್ದಾರೆ. ಉಭಯ ಆಟಗಾರರು ಕೂಡ ಐಪಿಎಲ್ ಆಡುತ್ತಿರುವುದರಿಂದ 2ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಕಂಡುಬರಲಿದೆ. ಟೂರ್ನಿ ಮುಕ್ತಾಯದ ಬಳಿಕವಷ್ಟೇ ಯಾರಿಗೆ 2ನೇ ಸ್ಥಾನ ಎನ್ನುವುದು ಖಚಿತಗೊಳ್ಳಲಿದೆ. ಅಲ್ಲಿಯ ತನಕ ಉಭಯ ಆಟಗಾರರ ಮಧ್ಯೆ ಹಾವು-ಏಣಿ ಆಟ ಮುಂದುವರಿಯುತ್ತಲೇ ಇರುತ್ತದೆ.
ಚೇಸಿಂಗ್ ವೇಳೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
ಕ್ರಿಸ್ ಗೇಲ್- 156 ಸಿಕ್ಸರ್
ಡೇವಿಡ್ ವಾರ್ನರ್-113* ಸಿಕ್ಸರ್
ರೋಹಿತ್ ಶರ್ಮ-112* ಸಿಕ್ಸರ್
ರಾಬಿನ್ ಉತ್ತಪ್ಪ-110 ಸಿಕ್ಸರ್
ಶೇನ್ ವಾಟ್ಸನ್-110 ಸಿಕ್ಸರ್
ಇದನ್ನೂ ಓದಿ IPL 2024 Points Table: ರಾಜಸ್ಥಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್
David Warner and his love with Indian songs. pic.twitter.com/cWxBfoqd8y
— Satya Prakash (@Satya_Prakash08) April 2, 2024
ಕಳೆದ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ಅವರು 14 ಪಂದ್ಯಗಳನ್ನು ಆಡಿ 526 ರನ್ ಬಾರಿಸಿದ್ದರು. ಇದರಲ್ಲಿ 5 ಅರ್ಧಶತಕ ಒಳಗೊಂಡಿತ್ತು. ಒಟ್ಟು 180 ಐಪಿಎಲ್ ಪಂದ್ಯಗಳನ್ನಾಡಿರುವ ವಾರ್ನರ್ 6545 ರನ್ ಕಲೆ ಹಾಕಿದ್ದಾರೆ. 4 ಶತಕ ಮತ್ತು 62 ಅರ್ಧಶತಕ ಬಾರಿಸಿದ್ದಾರೆ. ಇವರ ನಾಯಕತ್ವದಲ್ಲೇ ಸನ್ರೈಸರ್ಸ್ ಹೈದರಾಬಾದ್ ತಂಡ ಒಂದು ಬಾರಿ ಚಾಂಪಿಯನ್ ಪಟ್ಟ್ ಅಲಂಕರಿಸಿತ್ತು.
ಯುನಿವರ್ಸ್ ಖ್ಯಾತಿಯ ವಿಂಡೀಸ್ನ ಹಿರಿಯ ಎಡಗೈ ಬ್ಯಾಟರ್ ಕ್ರಿಸ್ ಗೇಲ್(Chris Gayle) ಅವರು ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿದ್ದಾರೆ. ಕೆಕೆಆರ್, ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡದ ಆಡಿರುವ ಗೇಲ್ ಒಟ್ಟು 142 ಪಂದ್ಯಗಳನ್ನು ಆಡಿ 357 ಸಿಕ್ಸರ್ ಸಿಡಿಸಿದ್ದಾರೆ. ರೋಹಿತ್ ಶರ್ಮ(Rohit Sharma) ಅವರು ಈ ಯಾದಿಯಲ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2008-2023ರ ವರೆಗಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 261 ಸಿಕ್ಸರ್ ಬಾರಿಸಿದ್ದಾರೆ.
ಡೆಲ್ಲಿಗೆ ಸೋಲು
ಬುಧವಾರ ವಿಶಾಖಪಟ್ಟಣದ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 16ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಫುಲ್ ಜೋಶ್ನಲ್ಲಿ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ ಬರೋಬ್ಬರಿ 272 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್ 17.2 ಓವರ್ಗಳಲ್ಲಿ 166 ರನ್ ಬಾರಿಸಿ ಸರ್ವಪತನ ಕಂಡಿತು. ಕೋಲ್ಕತ್ತಾ ತಂಡ 106ರನ್ ಗೆಲುವು ಸಾಧಿಸಿತು. ಕೆಕೆಆರ್ ಪರ ವೈಭವ್ ಅರೋರಾ ಮತ್ತು ವರುಣ್ ಚರ್ಕವರ್ತಿ ಘಾತಕ ಬೌಲಿಂಗ್ ನಡೆಸಿ ತಲಾ 3 ವಿಕೆಟ್ ಕಿತ್ತರು. 24.75 ಕೋಟಿ ವೀರ ಮಿಚೆಲ್ ಸ್ಟಾರ್ಕ್ ಅವರು ಈ ಪಂದ್ಯದಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರುವ ಮೂಲಕ 2 ವಿಕೆಟ್ ಪಡೆದರು.