ಬೆಂಗಳೂರು: ಪ್ರತಿ ವರ್ಷ ಐಪಿಎಲ್(IPL 2024) ಬಂದರೆ ಸಾಕು ಆಟಗಾರರ ಹಲವು ದಾಖಲೆಗಳನ್ನು ಕೆದಕಿ ಬರೆಯಲಾಗುತ್ತದೆ. ಇದೀಗ 17ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿಂದಿನ 16 ಆವೃತ್ತಿಯ ಇತಿಹಾಸದಲ್ಲಿ ಅತಿ ಹೆಚ್ಚು ಶೂನ್ಯ ಸಂಪಾದಿಸಿದ ಟಾಪ್ 5 ಬ್ಯಾಟರ್ಗಳ ಪಟ್ಟಿಯೊಂದು ಇಲ್ಲಿದೆ.
ದಿನೇಶ್ ಕಾರ್ತಿಕ್
ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಕೆಟ್ಟ ದಾಖಲೆ ದಿನೇಶ್ ಕಾರ್ತಿಕ್(Dinesh Karthik) ಹೆಸರಿನಲ್ಲಿದೆ. 242 ಐಪಿಎಲ್ ಪಂದ್ಯ ಆಡಿರುವ ಅವರು 17 ಬಾರಿ ಡಕೌಟ್ ಆಗಿದ್ದಾರೆ. ಹಲವು ಪ್ರಾಂಚೈಸಿಗಳ ಪರ ಆಡಿರುವ ದಿನೇಶ್ ಕಾರ್ತಿಕ್ ಐಪಿಎಲ್ನ ಎಲ್ಲ ಆವೃತ್ತಿಗಳಲ್ಲಿಯೂ ಆಡಿದ ಖ್ಯಾತಿ ಹೊಂದಿದ್ದಾರೆ. ಡೆಲ್ಲಿ ತಂಡದ ಪರ ಐಪಿಎಲ್ ಪದಾರ್ಪಣೆ ಮಾಡಿದ ಅವರು ಬಳಿಕ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಕೆಕೆಆರ್, ಗುಜರಾತ್ ಲಯನ್ಸ್ ಮತ್ತು ಆರ್ಸಿಬಿ ಪರ ಆಡಿದ್ದಾರೆ. ಸದ್ಯ ಆರ್ಸಿಬಿ ತಂಡದಲ್ಲಿರುವ ಅವರು ಈ ಬಾರಿಯ ಟೂರ್ನಿ ಬಳಿಕ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ IPL 2024: ಪ್ರತಿ ಸೀಸನ್ನ ಐಪಿಎಲ್ನಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರರು
ರೋಹಿತ್ ಶರ್ಮ
ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ, 5 ಟ್ರೋಫಿಗಳನ್ನು ಗೆದ್ದ ನಾಯಕ ರೋಹಿತ್ ಶರ್ಮ(Rohit Sharma) ಅವರಿಗೆ ಈ ಯಾದಿಯಲ್ಲಿ 2ನೇ ಸ್ಥಾನ. ರೋಹಿತ್ ಇದುವರೆಗೆ 243 ಐಪಿಎಲ್ ಪಂದ್ಯ ಆಡಿ 16 ಸಲ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದ್ದಾರೆ. ಐಪಿಎಲ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ದಾಖಲೆಯೂ ಇವರ ಹೆಸರಿನಲ್ಲಿದೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜಸ್ ಪರ ಕಣಕ್ಕಿಳಿಯುವ ಮೂಲಕ ಅವರು ತಮ್ಮ ಐಪಿಎಲ್ ಜರ್ನಿ ಆರಂಭಿಸಿದರು.
ಇದನ್ನೂ ಓದಿ IPL 2024 : ಐಪಿಎಲ್ನಲ್ಲಿ ತಂಡಗಳು ದಾಖಲಿಸಿದ ದೊಡ್ಡ ಅಂತರದ ಗೆಲುವುಗಳ ವಿವರ ಇಲ್ಲಿದೆ
ಸುನೀಲ್ ನರೈನ್
ವೆಸ್ಟ್ ಇಂಡೀಸ್ ಖ್ಯಾತ ಸ್ಪಿನ್ ಬೌಲರ್ ಸುನೀಲ್ ನರೈನ್(Sunil Narine) ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅವರು ಇದುವರೆಗೆ 15 ಬಾರಿ ಶೂನ್ಯ ಸಂಪಾದಿಸಿದ್ದಾರೆ. ಪ್ರಸ್ತುತ ಕೆಕೆಆರ್ ತಂಡದ ಸದಸ್ಯರಾಗಿದ್ದಾರೆ. 162 ಪಂದ್ಯಗಳಿಂದ 1046 ರನ್ ಬಾರಿಸಿದ್ದಾರೆ.
ಮನ್ದೀಪ್ ಸಿಂಗ್
ಐದು ಫ್ರಾಂಚೈಸಿ ಪರ ಆಡಿರುವ ಮನ್ದೀಪ್ ಸಿಂಗ್(Mandeep Singh) ಅವರು ಇದುವರೆಗೆ ಐಪಿಎಲ್ನಲ್ಲಿ 15 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಕೆಟ್ಟ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಅವರಿಗೆ ನಾಲ್ಕನೇ ಸ್ಥಾನ. 111 ಐಪಿಎಲ್ ಪಂದ್ಯ ಆಡಿರುವ ಇವರು 1706 ರನ್ ಬಾರಿಸಿದ್ದಾರೆ. ಇದರಲ್ಲಿ 6 ಅರ್ಧಶತಕ ದಾಖಲಾಗಿದೆ.
ಇದನ್ನೂ ಓದಿ IPL 2024: ಐಪಿಎಲ್ನ 17 ಆವೃತ್ತಿಗಳನ್ನು ಆಡುವ ಆಟಗಾರರಿವರು!
ರಶೀದ್ ಖಾನ್
ಅಫಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ ಆಲ್ರೌಂಡರ್ ರಶೀದ್ ಖಾನ್(Rashid Khan) ಅವರು 109* ಐಪಿಎಲ್ ಪಂದ್ಯಗಳನ್ನು ಆಡಿ ಒಟ್ಟು 14 ಶೂನ್ಯಕ್ಕೆ ಔಟಾಗಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಬೆನ್ನುನೋವಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ಮಾಡಲು ಕಾತರಗೊಂಡಿದ್ದಾರೆ. ರಶೀದ್ ಹಾಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ತಂಡದ ಆಟಗಾರ.