ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮಾರ್ಚ್ 22ರಿಂದ ಚಾಲನೆ ಸಿಗಲಿದೆ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿ ಆರಂಭಗೊಳ್ಳಲಿದೆ. ಇದೀಗ ಚೊಚ್ಚಲ ಆವೃತ್ತಿಯಿಂದ ಪ್ರಸಕ್ತ ಆವೃತ್ತಿಯ ತನಕ ಆಡುತ್ತಿರುವ ಆಟಗಾರರ ಮಾಹಿತಿ ಇಂತಿದೆ.
ವಿರಾಟ್ ಕೊಹ್ಲಿ
ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಇದುವರೆಗಿನ ಎಲ್ಲ ಐಪಿಎಲ್ ಆವೃತ್ತಿಯಲ್ಲಿಯೂ ಆಡಿದ್ದಾರೆ. ಇದು ಕೂಡ ಒಂದೇ ತಂಡದ ಪರ ಎನ್ನುವುದು ಇತಿಹಾಸ. ಇವರನ್ನು ಹೊರತುಪಡಿಸಿ ಯಾವುದೇ ಆಟಗಾರನೂ ಒಂದೇ ತಂಡದ ಪರ ಇಷ್ಟು ವರ್ಷ ಆಡಿಲ್ಲ. ಆರ್ಸಿಬಿ ಪರವೇ ಕೊಹ್ಲಿ ಆಡುತ್ತಿದ್ದಾರೆ. 16 ಆವೃತ್ತಿಗಳನ್ನು ಪೂರ್ತಿಗೊಳಿಸಿರುವ ಕೊಹ್ಲಿ ಐಪಿಎಲ್‌ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ಬಾರಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ನಿರೀಕ್ಷೆ ಇದೆ.
ಮಹೇಂದ್ರ ಸಿಂಗ್ ಧೋನಿ
5 ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೂಡ 2008 ಚೊಚ್ಚಲ ಆವೃತ್ತಿಯಿಂದ 2024ರ ಐಪಿಎಲ್ನಲ್ಲಿಯೂ ಆಡುತ್ತಿದ್ದಾರೆ. ಆದರೆ ಈ ಬಾರಿ ಅವರು ನಿವೃತ್ತಿ ಹೇಳಲಿದ್ದಾರೆ. ಕಳೆದ ವರ್ಷವೇ ಧೋನಿ ಐಪಿಎಲ್ ವಿದಾಯ ಹೇಳಲು ಮುಂದಾಗಿದ್ದರು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಒಂದು ವರ್ಷದ ಮಟ್ಟಿಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು.
ದಿನೇಶ್ ಕಾರ್ತಿಕ್
ಹಲವು ಪ್ರಾಂಚೈಸಿಗಳ ಪರ ಆಡಿರುವ ದಿನೇಶ್ ಕಾರ್ತಿಕ್ ಕೂಡ ಐಪಿಎಲ್ನ ಎಲ್ಲ ಆವೃತ್ತಿಗಳಲ್ಲಿಯೂ ಆಡಿದ ಖ್ಯಾತಿ ಹೊಂದಿದ್ದಾರೆ. ಡೆಲ್ಲಿ ತಂಡದ ಪರ ಐಪಿಎಲ್ ಪದಾರ್ಪಣೆ ಮಾಡಿದ ಅವರು ಬಳಿಕ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಕೆಕೆಆರ್, ಗುಜರಾತ್ ಲಯನ್ಸ್ ಮತ್ತು ಆರ್ಸಿಬಿ ಪರ ಆಡಿದ್ದಾರೆ. ಸದ್ಯ ಆರ್ಸಿಬಿ ತಂಡದಲ್ಲಿರುವ ಅವರು ಈ ಬಾರಿಯ ಟೂರ್ನಿ ಬಳಿಕ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ IPL 2024: ಪ್ರತಿ ಸೀಸನ್ನ ಐಪಿಎಲ್‌ನಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರರು
ವೃದ್ಧಿಮನ್ ಸಹಾ
ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಕೂಡ ಇದುವರೆಗಿನ ಎಲ್ಲ ಆವೃತ್ತಿಯ ಐಪಿಎಲ್ ಟೂರ್ನಿಗಳಲ್ಲಿ ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರ ಟ್ರೋಫಿಯನ್ನು ಕೂಡ ಗೆದ್ದಿದ್ದಾರೆ. ಪಂಜಾಜಾ ಪರ ಆಡುವ ವೇಳೆ ಶತಕವನ್ನು ಕೂಡ ಬಾರಿಸಿ ಗಮನ ಸೆಳೆದಿದ್ದರು.
ಶಿಖರ್ ಧವನ್
ಗಬ್ಬರ್ ಖ್ಯಾತಿಯ ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ಶಿಖರ್ ಧವನ್ ಕೂಡ ಎಲ್ಲ ಆವೃತ್ತಿಯ ಐಪಿಎಲ್ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ಅನುಭವ ಹೊಂದಿದ್ದಾರೆ. ಇದುವರೆಗಿನ ಐಪಿಎಲ್ ಪಂದ್ಯಗಳಿಂದ 6000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ IPL 2024 : ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್ಗಳು
ಮನೀಶ್ ಪಾಂಡೆ
ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದ ಕ್ರಿಕೆಟಿಗ ಮನೀಶ್ ಪಾಂಡೆ ಅವರು ಕೂಡ ಇದುವರೆಗಿನ ಎಲ್ಲ ಐಪಿಎಲ್ ಆವೃತ್ತಿಗಳಲ್ಲಿ ಆಡಿದ್ದಾರೆ. ಪ್ರಸ್ತುತ ಕೆಕೆಆರ್ ತಂಡದ ಆಟಗಾರನಾಗಿದ್ದಾರೆ. ಪಾಂಡೆ 2008ರಲ್ಲಿ ಮುಂಬೈ ಇಂಡಿಯನ್ಸ್ ಪರ ಚೊಚ್ಚಲ ಐಪಿಎಲ್ ಪಂದ್ಯ ಆಡಿದ್ದರು. ಆದರೆ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಇದನ್ನೂ ಓದಿ IPL 2024: ಅತಿ ಹೆಚ್ಚು ಐಪಿಎಲ್ ಶತಕ ಬಾರಿಸಿದ ದಾಂಡಿಗರಿವರು!
ರೋಹಿತ್ ಶರ್ಮ
ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ, 5 ಟ್ರೋಫಿ ಗೆದ್ದ ನಾಯಕ ರೋಹಿತ್ ಶರ್ಮ ಕೂಡ ಎಲ್ಲ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆಡಿದ್ದಾರೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜಸ್ ಪರ ಕಣಕ್ಕಿಳಿಯುವ ಮೂಲಕ ಅವರು ತಮ್ಮ ಐಪಿಎಲ್ ಜರ್ನಿ ಆರಂಭಿಸಿದರು. ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ದಾಖಲೆಯೂ ಇವರ ಹೆಸರಿನಲ್ಲಿದೆ.