ಅಹಮದಾಬಾದ್: ಕೆಕೆಆರ್ ವಿರುದ್ಧದ ಸೋಮವಾರದ ಐಪಿಎಲ್(IPL 2024) ಪಂದ್ಯ ರದ್ದು ಗೊಂಡ ಕಾರಣ ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಟೈಟಾನ್ಸ್ ತಂಡ ಈ ಬಾರಿಯ ಟೂರ್ನಿಯಿಂದ ಅಧಿಕೃತವಾಗಿ(IPL 2024 Points Table) ಹೊರಬಿದ್ದಿದೆ. ಸತತವಾಗಿ 2 ಬಾರಿ ಫೈನಲ್ ಪ್ರವೇಶಿಸಿ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ಈ ಬಾರಿ ಲೀಗ್ನಿಂದಲೇ ಹೊರಬಿದ್ದಿದೆ. ಸದ್ಯ ಗುಜರಾತ್ ಸೇರಿ ಒಟ್ಟು ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಉಳಿದ 2 ತಂಡಗಳೆಂದರೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್.
ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದುಗೊಂಡು ತಲಾ 1 ಅಂಕ ಲಭಿಸಿದರೂ ಡೆಲ್ಲಿಗೆ ಪ್ಲೇ ಆಫ್ ಅವಕಾಶ ಸಿಗುವುದಿಲ್ಲ.
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 13 | 9 | 3 | 19 (+1.428) |
ರಾಜಸ್ಥಾನ್ ರಾಯಲ್ಸ್ | 12 | 8 | 4 | 16 (+0.349) |
ಚೆನ್ನೈ | 13 | 7 | 6 | 14 (+0.528) |
ಹೈದರಾಬಾದ್ | 12 | 7 | 5 | 14 (+0.406) |
ಆರ್ಸಿಬಿ | 13 | 6 | 7 | 12 (+0.387) |
ಡೆಲ್ಲಿ | 13 | 6 | 7 | 12 (-0.482) |
ಲಕ್ನೋ | 12 | 6 | 6 | 12 (-0.769) |
ಗುಜರಾತ್ | 13 | 5 | 7 | 11 (-1.063) |
ಮುಂಬೈ | 13 | 4 | 9 | 8 (-0.271) |
ಪಂಜಾಬ್ | 12 | 4 | 8 | 8 (-0.423) |
ಪಂದ್ಯವು ಟಾಸ್ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.
ಇದನ್ನೂ ಓದಿ IPL 2024 : ಆರ್ಸಿಬಿ, ಆರ್ಆರ್ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು
ಗುಜರಾತ್ಗೆ ನಿರಾಶಾದಾಯಕ ಅಭಿಯಾನ
ಗುಜರಾತ್ ಟೈಟಾನ್ಸ್ ಪ್ಲೇಆಫ್ನಲ್ಲಿ ಸ್ಥಾನ ಪಡೆಯುವ ರೇಸ್ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.