Site icon Vistara News

IPL 2024 POINTS TABLE: ಹೈದರಾಬಾದ್​ಗೆ ಭರ್ಜರಿ ಗೆಲುವು; ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

IPL 2024 POINTS TABLE

ನವದೆಹಲಿ: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಪ್ಲೇ ಆಪ್​ ರೇಸ್​ ಆರಂಭವಾಗಿದ್ದು ಎಲ್ಲ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಶನಿವಾರ ನಡೆದ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಭರ್ಜರಿ 67 ರನ್​ಗಳ ಗೆಲುವು ಸಾಧಿಸಿದ ಸನ್​ರೈಸರ್ಸ್​ ಹೈದರಾಬಾದ್​ ತಂಡ 10 ಅಂಕ ಪಡೆದು(IPL 2024 POINTS TABLE) 2ನೇ ಸ್ಥಾನಕ್ಕೇರಿದೆ.

ಹೈದರಾಬಾದ್​ ಗೆಲುವಿನಿಂದ 2ನೇ ಸ್ಥಾನದಲ್ಲಿದ್ದ ಕೆಕೆಆರ್​ ತಂಡ ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನ ಪಡೆದಿದೆ. ಇಂದು ನಡೆಯುವ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಗೆಲುವು ಸಾಧಿಸಿದರೆ ಮತ್ತೆ 2ನೇ ಸ್ಥಾನ ಪಡೆಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಹೈದರಾಬಾದ್​​75210 (+0.914)
ಕೆಕೆಆರ್​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​​​7428 (+0.726)
ಲಕ್ನೋ7438 (+0.123)
ಮುಂಬೈ7346 (-0.133)
ಡೆಲ್ಲಿ ಕ್ಯಾಪಿಟಲ್ಸ್​​​8356 (-0.477)
ಗುಜರಾತ್7346 (-1.303)
ಪಂಜಾಬ್​7254 (-0.251)
ಆರ್​ಸಿಬಿ7162 (-1.185)

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹೈದರಾಬಾದ್​ ತಂಡಕ್ಕೆ ಆರಂಭಿಕರಾದ ಟ್ರಾವಿಸ್​ ಹೆಡ್​(89) ಮತ್ತು ಅಭಿಷೇಕ್​ ಶರ್ಮ(46) ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅಮೋಘ ಆರಂಭ ಒದಗಿಸಿದರು. ಇವರ ಈ ಬ್ಯಾಟಿಂಗ್​ ಪರಾಕ್ರಮದಿಂದ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 266 ರನ್​ ಬಾರಿಸಿತು. ಸವಾಲಿನ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಡೆಲ್ಲಿ ಕ್ಯಾಪಿಟಲ್ಸ್​ ಅಂತಿಮವಾಗಿ 19.1 ಓವರ್​ಗಳಲ್ಲಿ 199 ರನ್​ಗೆ ಸರ್ವಪತನ ಕಂಡಿತು.

ಇದನ್ನೂ ಓದಿ IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

ಸಂಕಷ್ಟದಲ್ಲಿದ್ದ ಡೆಲ್ಲಿಗೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಮತ್ತು ಅಭಿಷೇಕ್​ ಪೋರೆಲ್​ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ ಆಸರೆಯಾದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದಿಂದ ಡೆಲ್ಲಿ ಕೂಡ ಹೈದರಾಬಾದ್​ ತಂಡದಂತೆ 7 ಓವರ್​ಗೂ ಮುನ್ನ 100 ರನ್​ಗಳ ಗಡಿ ದಾಟಿತು. ಈ ವೇಳೆ ಡೆಲ್ಲಿ ಗೆಲುವಿನ ಆಸೆಯೊಂದು ಚಿಗುರಿಕೊಂಡಿತು. ಆದರೆ, ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸುತ್ತಿದ್ದ ಈ ಜೋಡಿಯನ್ನು ಮಯಾಂಕ್‌ ಮಾರ್ಕಂಡೆ ಬೇರ್ಪಡಿಸಿದರು. ಸತತ ಸಿಕ್ಸರ್​ ಚಚ್ಚಿಕೊಂಡಿದ್ದ ಮಾರ್ಕಂಡೆ ಕೊನೆಗೂ ಮ್ಯಾಕ್‌ಗುರ್ಕ್ ವಿಕೆಟ್​ ಕಿತ್ತು ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಮ್ಯಾಕ್‌ಗುರ್ಕ್ ಕೇವಲ 15 ಎಸೆತಗಳಿಂದ ಅರ್ಧಶತಕ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ದಾಖಲೆ ಬರೆದರು. ಎಬಿಡಿ ವಿಲಿಯರ್ಸ್​ ರೀತಿ ಬ್ಯಾಟಿಂಗ್​ ನಡೆಸಿದ ಮ್ಯಾಕ್‌ಗುರ್ಕ್ ಒಟ್ಟು 18 ಎಸೆತಗಳಿಂದ 65 ರನ್​ ಚಚ್ಚಿದರು. ಈ ವೇಳೆ 7 ಸೊಗಸಾದ ಸಿಕ್ಸರ್​ ಮತ್ತು 5 ಆಕರ್ಷಕ ಬೌಂಡರಿ ದಾಖಲಾಯಿತು. ಈ ವಿಕೆಟ್​ ಬಿದ್ದು 26 ರನ್​ ಒಟ್ಟುಗೂಡುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್​ ವಿಕೆಟ್​ ಕೂಡ ಪತನಗೊಂಡಿತು. ಈ ಜೋಡಿ ಮೂರನೇ ವಿಕೆಟ್​ಗೆ 84 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿತು. ಅಭಿಷೇಕ್ 22 ಎಸೆತಗಳಿಂದ 42 ರನ್( 7 ಬೌಂಡರಿ, 1 ಸಿಕ್ಸ್​)​ ಬಾರಿಸಿದರು. ಈ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಡೆಲ್ಲಿ ಸೋಲು ಕೂಡ ಖಚಿತಗೊಂಡಿತು. ಹೈದರಾಬಾದ್​ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ಎಡಗೈ ವೇಗಿ ಟಿ.ನಟರಾಜನ್​ ಕೇವಲ 19 ರನ್​ ನೀಡಿ ಪ್ರಮುಖ 4 ವಿಕೆಟ್​ ಕಿತ್ತು ಮಿಂಚಿದರು. ಮಾರ್ಕಂಡೆ 2 ವಿಕೆಟ್​ ಪಡೆದರು.

Exit mobile version