ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಪ್ಲೇ ಆಫ್ ಟಿಕೆಟ್ ಪಡೆಯಲು ಎಲ್ಲ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಭಾನುವಾರ ನಡೆದ ಡಬಲ್ ಹೆಡರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಕೆಆರ್ ಭರ್ಜರಿ ಗೆಲುವು ಸಾಧಿಸಿವೆ. ಉಭಯ ತಂಡಗಳ ಗೆಲುವಿನಿಂದ ಅಂಕಪಟ್ಟಿಯಲ್ಲಿ(IPL 2024 Points Table) ಭಾರೀ ಬದಲಾವಣೆ ಸಂಭವಿಸಿದೆ.
ನಂ.1 ಸ್ಥಾನಕ್ಕೇರಿದ ಕೆಕೆಆರ್
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 98 ರನ್ಗಳ ಗೆಲುವು ಸಾಧಿಸಿದ ಕೆಕೆಆರ್ 16 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ. ಅಗ್ರಸ್ಥಾನಿಯಾಗಿದ್ದ ರಾಜಸ್ಥಾನ್ 2ನೇ ಸ್ಥಾನಕ್ಕೆ ಕುಸಿದಿದೆ. ಉಭಯ ತಂಡಗಳಿಗೂ 16 ಅಂಕ ಇದ್ದರೂ ಕೆಕೆಆರ್ ರನ್ ರೇಟ್ ಉತ್ತಮವಾಗಿದೆ. ಹೀಗಾಗಿ ಮೊದಲ ಸ್ಥಾನ ಪಡೆದಿದೆ. ಸೋಲು ಕಂಡ ಲಕ್ನೋ 5ನೇ ಸ್ಥಾನಕ್ಕೆ ಜಾರಿದೆ. ಪಂಜಾಬ್ ವಿರುದ್ಧ 28 ರನ್ ಅಂತರದ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಚೆನ್ನೈ 5ರಿಂದ 3ನೇ ಸ್ಥಾನಕ್ಕೇರಿದೆ. ಪಂಜಾಬ್ 8ನೇ ಸ್ಥಾನದಲ್ಲಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 11 | 8 | 3 | 16 (+1.453) |
ರಾಜಸ್ಥಾನ್ ರಾಯಲ್ಸ್ | 10 | 8 | 2 | 16 (+0.622) |
ಚೆನ್ನೈ | 11 | 6 | 5 | 14 (+0.700) |
ಹೈದರಾಬಾದ್ | 10 | 6 | 5 | 12 (+0.072) |
ಲಕ್ನೋ | 11 | 6 | 5 | 12 (-0.371) |
ಡೆಲ್ಲಿ | 11 | 5 | 6 | 10 (-0.442) |
ಆರ್ಸಿಬಿ | 11 | 4 | 7 | 8 (-0.049) |
ಪಂಜಾಬ್ | 10 | 4 | 6 | 8 (-0.062) |
ಗುಜರಾತ್ | 11 | 4 | 7 | 8 (-1.320) |
ಮುಂಬೈ | 11 | 3 | 8 | 6 (-0.356) |
ಪಂಜಾಬ್ಗೆ ಸೋಲು
ದಿನದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ವಿರುದ್ಧ ಸೋಲು ಕಂಡಿತು. ಸಾಧಾರಣ ಮೊತ್ತವನ್ನು ಕೂಡ ಬೆನ್ನಟ್ಟಲಾಗದೆ 28 ರನ್ಗಳ ಸೋಲಿಗೆ ತುತ್ತಾಯಿತು. ಈ ಸೋಲಿನಿಂದ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ. ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಸತತವಾಗಿ ವಿಕೆಟ್ ಕಳೆದುಕೊಂಡು ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 9 ವಿಕೆಟ್ ಕಳೆದುಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ IPL 2024 : ಇವರೇ ನೋಡಿ ಐಪಿಎಲ್ 2024ರ ಮೊದಲ ಕನ್ಕಷನ್ ಬದಲಿ ಆಟಗಾರ
ಕೆಕೆಆರ್ಗೆ 98 ರನ್ಗಳ ಬೃಹತ್ ಜಯ
ರಾತ್ರಿಯ ಪಂದ್ಯದಲ್ಲಿ ಕೆಕೆಆರ್ ತಂಡ ಲಕ್ನೋ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಮೆರೆದಾಡಿತು. ಶ್ರೀ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್ ಬಳಗ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 235 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್ಗಳಲ್ಲಿ 137 ರನ್ಗಳಿಗೆ ಆಲ್ಔಟ್ ಆಗಿ ಹೀನಾಯ ಸೋಲಿಗೆ ಒಳಗಾಯಿತು.